ADVERTISEMENT

ಮ್ಯಾಜಿಕ್‌ ಶೋ, ಬೀದಿ ಸಭೆ: ದೆಹಲಿ ಪಾಲಿಕೆ ಚುನಾವಣೆಯಲ್ಲಿ AAP ವಿಭಿನ್ನ ಪ್ರಚಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2022, 11:19 IST
Last Updated 22 ನವೆಂಬರ್ 2022, 11:19 IST
ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಪ‍್ರಚಾರ (ಪಿಟಿಐ ಚಿತ್ರ)
ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಪ‍್ರಚಾರ (ಪಿಟಿಐ ಚಿತ್ರ)   

ನವದೆಹಲಿ: ವಿಭಿನ್ನ ಚುನಾವಣಾ ಪ್ರಚಾರಗಳ ಮೂಲಕ ದೆಹಲಿ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಮತದಾರರ ಓಲೈಕೆಗೆ ಆಮ್‌ ಆದ್ಮಿ ಪಕ್ಷ ಮುಂದಾಗಿದೆ.

ಬುಧವಾರದಿಂದ ಎರಡನೇ ಹಂತದ ಚುನಾವಣಾ ಪ್ರಚಾರ ಆರಂಭವಾಗಲಿದ್ದು, ಗಿಟಾರ್ ಹಾಗೂ ಮ್ಯಾಜಿಕ್‌ ಶೋ, ಸ್ಟಾರ್‌ ಪ್ರಚಾರದಿಂದ 1000 ಬೀದಿ ಸಭೆ ಮುಂತಾದ ವಿಭಿನ್ನ ಪ್ರಚಾರಗಳನ್ನು ಆಮ್ ಆದ್ಮಿ ಪಕ್ಷ ಹಮ್ಮಿಕೊಂಡಿದೆ.

‘ದೆಹಲಿಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಶಾಲೆ, ಆಸ್ಪತ್ರೆ ಮುಂತಾದ ವಿಷಯಗಳನ್ನು ಇಟ್ಟುಕೊಂಡು ಮೊದಲನೇ ಹಂತದಲ್ಲಿ ಪ್ರಚಾರ ಮಾಡಲಾಗಿತ್ತು. ದೆಹಲಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಇದೇ ತರಹದ ಕೆಲಸಗಳನ್ನು ಮಾಡಲಿದ್ದೇವೆ‘ ಎಂದು ದೆಹಲಿ ಎಎಪಿ ಸಂಚಾಲಕ ಗೋಪಾಲ್‌ ರೈ ಹೇಳಿದ್ದಾರೆ.

ADVERTISEMENT

ಮೊದಲ ಹಂತದ ಚುಮಾವಣೆ ‍ಪ್ರಚಾರದ ವೇಳೆ ‘ಎಂಸಿಡಿಯಲ್ಲೂ ಕೇಜ್ರಿವಾಲ್‌‘ ಎನ್ನುವ ಘೋಷಣೆಯನ್ನು ಎಎಪಿ ಮೊಳಗಿಸಿತ್ತು. ಈ ವೇಳೆ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚಿಸಿದ್ದರು.

ಎರಡನೇ ಹಂತದ ಚುನಾವಣೆ ಪ್ರಚಾರದ ವೇಳೆ. ‘ಕೇಜ್ರಿವಾಲ್ ಸರ್ಕಾರ, ಕೇಜ್ರಿವಾಲರ ಕೌನ್ಸಿಲರ್‌‘ ಎನ್ನುವ ಘೋಷವಾಕ್ಯದೊಂದಿಗೆ ಪ್ರಚಾರ ನಡೆಸಲಿದ್ದೇವೆ ಎಂದು ರೈ ಹೇಳಿದ್ದಾರೆ.

‘ನಾಳೆಯಿಂದ ನಮ್ಮ ಪಕ್ಷದ ಪ್ರಚಾರ ವೇಗ ‍‍ಪಡೆದುಕೊಳ್ಳಲಿದೆ. ನಮ್ಮ ಸ್ಟಾರ್‌ ಪ್ರಚಾರಕರು 1000 ಬೀದಿ ಸಭೆಗಳನ್ನು ನಡೆಸಲಿದ್ದಾರೆ. ನವೆಂಬರ್‌ 23 ರಂದು 45 ಬೀದಿ ಸಭೆಗಳು ನಡೆಯಲಿವೆ. ಡಿಸೆಂಬರ್ 2ರ ವರೆಗೆ ಇದು ಮುಂದುವರಿಯಲಿದೆ ಎಂದು ಗೋಪಾಲ್‌ ರೈ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.