ADVERTISEMENT

ಸಚಿವೆ ನಿರ್ಮಲಾ ಘೋಷಿಸಿದ ಹೊಸ ಪ್ಯಾಕೇಜ್‌ ಬಗ್ಗೆ ಪ್ರಧಾನಿ ಅಭಿಪ್ರಾಯವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜೂನ್ 2021, 16:30 IST
Last Updated 28 ಜೂನ್ 2021, 16:30 IST
ನರೇಂದ್ರ ಮೋದಿ
ನರೇಂದ್ರ ಮೋದಿ    

ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಅವರು ಇಂದು ಘೋಷಿಸಿರುವ ಆರ್ಥಿಕ ಕ್ರಮಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುತ್ತವೆ. ವಿಶೇಷವಾಗಿ ಸೌಲಭ್ಯ ವಂಚಿತ ಪ್ರದೇಶಗಳಲ್ಲಿ ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿಗೆ ಖಾಸಗಿ ಹೂಡಿಕೆಯನ್ನು ಉತ್ತೇಜಿಸುತ್ತದೆ. ನಮ್ಮ ಮಕ್ಕಳಿಗೆ ಅಗತ್ಯವಿರುವ ಆರೋಗ್ಯ ಸೇವೆಯನ್ನು ಬಲಿಷ್ಠಗೊಳಿಸುವತ್ತ ಈ ಕ್ರಮಗಳು ವಿಶೇಷ ಗಮನ ಹರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೋವಿಡ್ -19 ನಿಂದ ಜರ್ಜರಿತಗೊಂಡ ಆರ್ಥಿಕತೆಯ ಪುನಶ್ಚೇತನಕ್ಕಾಗಿ ₹1.1 ಲಕ್ಷ ಕೋಟಿಗಳ ಸಾಲ ಖಾತರಿ ಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಪ್ರಕಟಿಸಿದರು.

ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಇಂದಿನ ಆರ್ಥಿಕ ಕ್ರಮಗಳಲ್ಲಿ ನಮ್ಮ ರೈತರಿಗೆ ನೆರವು ನೀಡಲಾಗಿದೆ. ಇದರಿಂದ ರೈತರ ಉತ್ಪಾದನಾ ವೆಚ್ಚ ಕಡಿಮೆಯಾಗಿ ಆದಾಯ ವೃದ್ಧಿಯಾಗುತ್ತದೆ. ಕೃಷಿ ಚಟುವಟಿಕೆಗಳ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಯನ್ನು ಬೆಂಬಲಿಸುವ ಅನೇಕ ಉಪಕ್ರಮಗಳನ್ನು ಘೋಷಿಸಲಾಗಿದೆ,‘ ಎಂದು ಅವರು ಹೇಳಿದ್ದಾರೆ.

ADVERTISEMENT

‘ಸಣ್ಣ ಉದ್ಯಮಿಗಳು, ಸ್ವಯಂ ಉದ್ಯೋಗಿಗಳಿಗೆ ಅವರ ವ್ಯಾಪಾರ ಚಟುವಟಿಕೆಗಳನ್ನು ಉಳಿಸಿಕೊಳ್ಳಲು ಪ್ಯಾಕೇಜ್‌ನಲ್ಲಿ ಬೆಂಬಲ ನೀಡಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿರುವವರಿಗೆ ಸಹಾಯ ಮಾಡಲು ಹಣಕಾಸಿನ ನೆರವು ಸೇರಿದಂತೆ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ,‘ ಎಂದು ಅವರು ತಿಳಿಸಿದ್ದಾರೆ.

‘ಈ ಕ್ರಮಗಳು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು, ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಮತ್ತು ಉದ್ಯೋಗವನ್ನು ಸೃಷ್ಟಿಸಲು ನೆರವಾಗುತ್ತವೆ,‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.