
ಬುಲಂದ್‌ಶಹರ್: ಹೆರಿಗೆ ನೋವು ಕಾಣಿಸಿಕೊಂಡಿದ್ದ ಮಹಿಳೆಗೆ ಆಶಾ ಕಾರ್ಯಕರ್ತೆ ಹಾಗೂ ಸೂಲಗಿತ್ತಿ ಸೇರಿ ಬಲವಂತವಾಗಿ ಹೆರಿಗೆ ಮಾಡಿಸಿದ್ದರ ಪರಿಣಾಮ ಮಗುವಿನ ರುಂಡ ಮತ್ತು ಮುಂಡ ಬೇರ್ಪಟ್ಟಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಮಹಿಳೆಯ ಪತಿ ಝಮ್ಮನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
'ನನ್ನ ಪತ್ನಿ ರಾಜ್‌ಕುಮಾರಿಗೆ ಜನವರಿ 25ರಂದು ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಆಶಾ ಕಾರ್ಯಕರ್ತೆ ರೂಪಾವತಿ ಅವರಿಗೆ ಮಾಹಿತಿ ನೀಡಿದ್ದೆವು. ಅವರು, ಆಂಬ್ಯುಲೆನ್ಸ್‌ಗೆ ಕರೆ ಮಾಡುವ ಬದಲು ಸೂಲಗಿತ್ತಿ ಜಮೀಲಾ ಅವರಿಗೆ ಕರೆ ಮಾಡಿದ್ದರು' ಎಂದು ಸಂತ್ರಸ್ತೆಯ ಪತಿ ದೂರಿನಲ್ಲಿ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಲವಂತವಾಗಿ ಹೆರಿಗೆ ಮಾಡಿಸಲು ಮುಂದದಾಗ ಶಿಶುವಿನ ತಲೆ ಗರ್ಭದಲ್ಲಿಯೇ ಉಳಿದುಕೊಂಡಿತ್ತು, ದೇಹದ ಉಳಿದ ಭಾಗಗಳು ಹೊರ ಬಂದಿದ್ದವು. ಆಶಾ ಕಾರ್ಯಕರ್ತೆ ಹಾಗೂ ಸೂಲಗಿತ್ತಿ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.