ADVERTISEMENT

ಮೆಡಿಕಲ್ ಪ್ರತಿನಿಧಿಗಳು ಸರ್ಕಾರಿ ವೈದ್ಯರನ್ನು ಭೇಟಿಯಾಗುವಂತಿಲ್ಲ: DGHS ಆದೇಶ

ಪಿಟಿಐ
Published 3 ಜೂನ್ 2025, 11:44 IST
Last Updated 3 ಜೂನ್ 2025, 11:44 IST
   

ನವದೆಹಲಿ: ‌ಆಸ್ಪತ್ರೆ ಆವರಣದಲ್ಲಿ ಕೇಂದ್ರ ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನು ವೈದ್ಯಕೀಯ ಪ್ರತಿನಿಧಿಗಳು ಭೇಟಿ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ (ಡಿಜಿಹೆಚ್‌ಎಸ್) ಆದೇಶ ಹೊರಡಿಸಿದೆ.

ರೋಗಿಗಳ ಹಿತಾಸಕ್ತಿ ಕಾಪಾಡಲು ಹಾಗೂ ನೈತಿಕ ಹೊಣೆಗಾರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಆರೋಗ್ಯ ಸಂಸ್ಥೆಗಳ ಮುಖ್ಯಸ್ಥರು ಈ ಕುರಿತು ಎಲ್ಲಾ ಅಧಿಕಾರಿಗಳಿಗೆ ಅಗತ್ಯವಾದ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು‌. ಆದೇಶ ಉಲ್ಲಂಘನೆಯಾದರೆ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ನಿರ್ದೇಶನಾಲಯಕ್ಕೆ ವರದಿ ನೀಡಬೇಕು ಎಂದು ಸೂಚಿಸಿದೆ.

ADVERTISEMENT

ಸರ್ಕಾರಿ ಆಸ್ಪತ್ರೆಯ ವೈದ್ಯರ ಬಳಿ ಯಾವುದೇ ಚಿಕಿತ್ಸೆ ಅಥವಾ ಹೊಸ ಸೌಲಭ್ಯಗಳ ಕುರಿತು ಮಾಹಿತಿ ಪಡೆಯಬೇಕಿದ್ದರೆ ಇ-ಮೇಲ್ ಅಥವಾ ಡಿಜಿಟಲ್ ಮಾಧ್ಯಮಗಳ ಮೂಲಕ ಪಡೆದುಕೊಳ್ಳಬಹುದು ಎಂದು ಅದು ತಿಳಿಸಿದೆ.

ಆಸ್ಪತ್ರೆ ಆವರಣದಲ್ಲಿ ವೈದ್ಯಕೀಯ ಪ್ರತಿನಿಧಿಗಳು ತಮ್ಮ ಕಂಪನಿಯ ಔಷಧಿಗಳನ್ನು ರೋಗಿಗಳಿಗೆ ಶಿಫಾರಸು ಮಾಡುವಂತೆ ವೈದ್ಯರ ಮೇಲೆ ಪ್ರಭಾವ ಬೀರುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಗಳ ಆವರಣ ಪ್ರವೇಶಿಸದಿರುವಂತೆಯೂ ಈ ಹಿಂದೆ ಡಿಜಿಹೆಚ್‌ಎಸ್ ಸೂಚನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.