ADVERTISEMENT

ಕೇರಳ: ಕೋವಿಡ್ ಸೋಂಕಿತರಿಗಾಗಿ ಅಡುಗೆಯನ್ನೂ ಮಾಡುತ್ತಿದ್ದಾರೆ ಆಸ್ಪತ್ರೆ ಸಿಬ್ಬಂದಿ!

ಆಸ್ಪತ್ರೆಯೊಳಗೆ ಅಡುಗೆಮನೆ

ಅರ್ಜುನ್ ರಘುನಾಥ್
Published 16 ಏಪ್ರಿಲ್ 2020, 9:40 IST
Last Updated 16 ಏಪ್ರಿಲ್ 2020, 9:40 IST
ಆಹಾರ ಸಿದ್ಧಪಡಿಸುತ್ತಿರುವ ವೈದ್ಯಕೀಯ ಸಿಬ್ಬಂದಿ – ಡೆಕ್ಕನ್ ಹೆರಾಲ್ಡ್ ಚಿತ್ರ
ಆಹಾರ ಸಿದ್ಧಪಡಿಸುತ್ತಿರುವ ವೈದ್ಯಕೀಯ ಸಿಬ್ಬಂದಿ – ಡೆಕ್ಕನ್ ಹೆರಾಲ್ಡ್ ಚಿತ್ರ   

ತಿರುವನಂತಪುರ: ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಇರುವುದು ರೋಗಿಗಳ ಆರೈಕೆ ಮಾಡಲು ಎಂಬುದು ನಿಜ. ಆದರೆ ಕೇರಳದ ಸರ್ಕಾರಿ ಆಸ್ಪತ್ರೆಯೊಂದರ ವೈದ್ಯಕೀಯ ಸಿಬ್ಬಂದಿ ಕೋವಿಡ್ ಸೋಂಕಿತರಿಗೆ ಮನೆಯೂಟದ್ದೇ ಅನುಭವ ಆಸ್ಪತ್ರೆಯಲ್ಲೂ ಸಿಗಲಿ ಎಂದು ತಾವೇ ಕೈಯಾರೆ ಅಡುಗೆಯನ್ನೂ ಮಾಡುತ್ತಿದ್ದಾರೆ!

ಹೌದು, ಕೇರಳದ ಪತ್ತನಂತಿಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಆರೈಕೆ ಮಾಡುವುದರ ಜತೆಗೆ ಅವರಿಗಾಗಿ ಆಹಾರವನ್ನೂ ಸಿದ್ಧಪಡಿಸುತ್ತಿದ್ದಾರೆ ವೈದ್ಯಕೀಯ ಸಿಬ್ಬಂದಿ. ಇದಕ್ಕಾಗಿ ತಾತ್ಕಾಲಿಕ ಅಡುಗೆ ಮನೆಯೂ ಆಸ್ಪತ್ರೆಯಲ್ಲಿ ಸಿದ್ಧವಾಗಿದೆ.

ಕೇರಳ ಸರ್ಕಾರದ ವತಿಯಿಂದ ಆರಂಭಿಸಲಾಗಿರುವ ‘ಸಮುದಾಯ ಅಡುಗೆ ಮನೆ’ಗಳಿಂದ ಸಸ್ಯಾಹಾರಿ ಊಟ, ತಿಂಡಿಯನ್ನು ಆಸ್ಪತ್ರೆಗೂ ಕಳುಹಿಸಿಕೊಡಲಾಗುತ್ತಿದೆ. ಆದರೆ, ನಿರಂತರ ಸಸ್ಯಾಹಾರವನ್ನೇ ಸೇವಿಸಲು ಕೆಲವು ಸೋಂಕಿತರಿಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಇದನ್ನು ಗಮನಿಸಿದ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯಲ್ಲೇ ಅಡುಗೆ ಆರಂಭಿಸಿದ್ದಾರೆ.

ADVERTISEMENT

‘ಆಸ್ಪತ್ರೆಯ ಆಹಾರ ತಜ್ಞರ ನಿರ್ದೇಶನದ ಮೇರೆಗೆ ಇಲ್ಲಿ ಅಡುಗೆ ಸಿದ್ಧಪಡಿಸಲಾಗುತ್ತಿದೆ. ‘ಸಮುದಾಯ ಅಡುಗೆ ಮನೆ’ಗಳಿಂದಲೂ ಆಹಾರವನ್ನು ತರಿಸಿಕೊಳ್ಳುತ್ತಿದ್ದೇವೆ. ಅದರ ಜತೆಗೆ ಮಾಂಸಾಹಾರವೂ ಸೇರಿದಂತೆ ಸ್ಥಳೀಯ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ’ ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ಸಜನ್ ಮ್ಯಾಥ್ಯೂ ಹೇಳಿದ್ದಾರೆ. ಬೆಳಗಿನ ತಿಂಡಿ, ಸಂಜೆಯ ಉಪಾಹಾರ, ರಾತ್ರಿಯ ಊಟವನ್ನೂ ಆಸ್ಪತ್ರೆಯಲ್ಲಿ ಸಿದ್ಧಪಡಿಸಲಾಗುತ್ತಿದೆ.

ಆಸ್ಪತ್ರೆಯ ಆಡಳಿತ ಮಂಡಳಿ ಸಮಿತಿಯ ಸಹಕಾರ, ವೈದ್ಯರು ಮತ್ತು ಇತರ ಸಿಬ್ಬಂದಿಯ ನೆರವಿನೊಂದಿಗೆ ಸಿಬ್ಬಂದಿ ಮಂಡಳಿಯು ಈ ಅಡುಗೆ ಮನೆಯನ್ನು ನಿರ್ವಹಿಸುತ್ತಿದೆ.

ಸದ್ಯ ಈ ಆಸ್ಪತ್ರೆಗೆ ಏಳು ಮಂದಿ ಕೊರೊನಾ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಈ ಪೈಕಿ ಐವರಲ್ಲಿ ಸೋಂಕು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.