ADVERTISEMENT

'ಬಾಹುಬಲಿ' ಸಮೋಸ: ಅರ್ಧ ಗಂಟೆಯಲ್ಲಿ ತಿಂದರೆ ಸಿಗುತ್ತದೆ ₹71 ಸಾವಿರ

ಪಿಟಿಐ
Published 18 ಜೂನ್ 2023, 7:40 IST
Last Updated 18 ಜೂನ್ 2023, 7:40 IST
ಬಾಹುಬಲಿ ಸಮೋಸ (FB/ Hemang Parikh)
ಬಾಹುಬಲಿ ಸಮೋಸ (FB/ Hemang Parikh)   

ಮೀರತ್‌: ಬರೋಬ್ಬರಿ 12 ಕೆ ಜಿ ತೂಕವಿರುವ 'ಬಾಹುಬಲಿ' ಸಮೋಸವನ್ನು ಅರ್ಧ ಗಂಟೆಯಲ್ಲಿ ತಿಂದು ಮುಗಿಸಿದವರಿಗೆ ಸಿಗುತ್ತದೆ ₹71 ಸಾವಿರ.... ಹೌದು ಹೀಗೊಂದು ವಿಶಿಷ್ಟ ಸ್ಪರ್ಧೆಯನ್ನು ಉತ್ತರ ಪ್ರದೇಶದ ಮೀರತ್‌ನ ಬೇಕರಿಯೊಂದು ನಡೆಸಿಕೊಂಡು ಬರುತ್ತಿದೆ.

ಮೀರತ್‌ನ 'ಕೌಶಾಲ್‌ ಸ್ವೀಟ್ಸ್‌' ಬೇಕರಿಯ ಮಾಲೀಕ ಶುಭಂ ಕೌಶಾಲ್ ಈ ಸ್ಪರ್ಧೆಯನ್ನು ಆಯೋಜಿಸಿದವರು. ಏನಾದರೂ ವಿಭಿನ್ನವಾಗಿ ಮಾಡಿ ಎಲ್ಲರ ಗಮನ ಸೆಳೆಯಬೇಕೆಂಬ ಉದ್ದೇಶದಿಂದ ಈ ಪ್ರಯತ್ನಕ್ಕೆ ಕೈ ಹಾಕಿರುವುದಾಗಿ ಹೇಳಿದ್ದಾರೆ.

'ಸಮೋಸ ತಯಾರಿಯಲ್ಲೇ ಏನಾದರೂ ವಿಭಿನ್ನವಾಗಿ ಮಾಡಿ ಎಲ್ಲರ ಗಮನ ಸೆಳೆಯಬೇಕೆಂದು ನಿರ್ಧರಿಸಿದೇವು. ಮೊದಲಿಗೆ ನಾಲ್ಕು ಕೆಜಿ ಸಮೋಸ ತಯಾರಿಸಲಾಯಿತು, ನಂತರ ಎಂಟು, ತದನಂತರ 10, ಇದೀಗ 12 ಕೆಜಿ ಸಮೋಸ ತಯಾರಿಸಿದ್ದೇವೆ' ಎಂದು ಶುಭಂ ಕೌಶಲ್‌ ಹೇಳಿದರು.

ADVERTISEMENT

'ಫುಡ್‌ ಬ್ಲಾಗರ್‌ ಮತ್ತು ಸಾಮಾಜಿಕ ಜಾಲತಾಣಗಳಿಂದ ‘ಬಾಹುಬಲಿ‘ ಸಮೋಸದ ಬಗ್ಗೆ ದೇಶದ ಜನತೆಗೆ ತಿಳಿದಿದೆ. ಸ್ಥಳೀಯರು ಮತ್ತು ದೇಶದ ಇತರರ ಭಾಗಗಳ ಜನರು ಬಾಹುಬಲಿ ಸಮೋಸದ ಬಗ್ಗೆ ಕುತೂಹಲದಿಂದ ಕೇಳುತ್ತಾರೆ' ಎಂದು ಸಂತಸ ಹಂಚಿಕೊಂಡರು.

'ಬಾಹುಬಲಿ ಸಮೋಸವನ್ನು ತಯಾರಿಸಲು ಸುಮಾರು 6 ಗಂಟೆ ಬೇಕಾಗುತ್ತದೆ. ಇದನ್ನು ಎಣ್ಣೆಯಲ್ಲಿ ಹುರಿಯುವುದಕ್ಕೆ ಸುಮಾರು 90 ನಿಮಿಷ ತೆಗೆದುಕೊಳ್ಳುತ್ತದೆ. ಹುರಿಯುವ ಕೆಲಸಕ್ಕೆ ಮೂರು ಜನ ಬೇಕಾಗುತ್ತದೆ' ಎಂದು ಹೇಳಿದರು.

'ಹುಟ್ಟುಹಬ್ಬದ ಸಂದರ್ಭ ಕೇಕ್‌ಗೆ ಬದಲಾಗಿ ಬಾಹುಬಲಿ ಸಮೋಸವನ್ನು ಆರ್ಡರ್‌ ಮಾಡುತ್ತಾರೆ. ಇಲ್ಲಿಯವರೆಗೆ 40ರಿಂದ 50 ಆರ್ಡರ್‌ ಬಂದಿದೆ. ಅಲ್ಲದೇ ಸಮೋಸವನ್ನು ಅರ್ಧ ಗಂಟೆಯಲ್ಲಿ ತಿಂದು ಮುಗಿಸಿದವರಿಗೆ ₹71 ಸಾವಿರ ನಗದು ಬಹುಮಾನ ನೀಡಲಾಗುತ್ತದೆ' ಎಂದು ಹೇಳಿದರು.

ಇಡೀ ದೇಶದಲ್ಲೇ ನಾವು ತಯಾರಿಸಿದ ಸಮೋಸವೇ ಅತೀ ದೊಡ್ಡ ಸಮೋಸವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.