ಹೈದರಾಬಾದ್: ಜಾಗತಿಕ ಪ್ರಾತಿನಿಧ್ಯ ಬಿಂಬಿಸುವ 72ನೇ ವಿಶ್ವ ಸುಂದರಿ ಸ್ಪರ್ಧೆಗೆ ನಯನ ಮನೋಹರವಾದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಧಿಕೃತ ಚಾಲನೆ ಸಿಕ್ಕಿದೆ.
ಆಕರ್ಷಕ ಮೆರವಣಿಗೆ ಮತ್ತು ಸಾಂಪ್ರದಾಯಿಕ ಮೇಳದಲ್ಲಿ ವಿಶ್ವ ಸುಂದರಿಯರು ವಿಶಿಷ್ಟವಾದ ಉಡುಗೆ ತೊಟ್ಟು ಹೆಜ್ಜೆ ಹಾಕಿದರು. ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರಾಜಸ್ಥಾನ ಮೂಲದ ನಂದಿನಿ ಗುಪ್ತಾ ಅವರು ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದ್ದು, ವಿಶಿಷ್ಟವಾಗಿತ್ತು.
ಈ ಸ್ಪರ್ಧೆಯಲ್ಲಿ ವಿಶ್ವ ಸುಂದರಿ ಪಟ್ಟವನ್ನು ತಮ್ಮದಾಗಿಸಿಕೊಳ್ಳಲು ಭಾರತ, ಶ್ರೀಲಂಕಾ, ನೇಪಾಳ ಹಾಗೂ ಬಾಂಗ್ಲಾದೇಶ ಸೇರಿದಂತೆ 110 ರಾಷ್ಟ್ರಗಳ ಸುಂದರಿಯರು ಪರಸ್ಪರ ಪೈಪೋಟಿಗೆ ಇಳಿದಿದ್ದಾರೆ. ಆದರೆ, ಈ ಬಾರಿಯೂ ಪಾಕಿಸ್ತಾನ ಭಾಗಿಯಾಗಿಲ್ಲ.
ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟಿನ ಪರಿಸ್ಥಿತಿಗೂ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪಾಕಿಸ್ತಾನದ ಪ್ರತಿನಿಧಿಗಳ ಗೈರು ಹಾಜರಾತಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪಾಕಿಸ್ತಾನವು ಎಂದಿಗೂ ಭಾಗವಹಿಸಿಲ್ಲ. 72 ವರ್ಷಗಳ ವಿಶ್ವ ಸುಂದರಿ ಸ್ಪರ್ಧೆಯ ಇತಿಹಾಸದಲ್ಲಿ 2023ರಲ್ಲಿ ಎರಿಕಾ ರಾಬಿನ್ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. ಇದಕ್ಕೆ ಪಾಕಿಸ್ತಾನದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಪಾಕಿಸ್ತಾನದ ಪ್ರತಿನಿಧಿ ಭಾಗವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಹಲವರು ಟೀಕಿಸಿದ್ದರು ಎಂದು ವಿಶ್ವ ಸುಂದರಿ ಸ್ಪರ್ಧೆಯ ಪ್ರಚಾರಕರೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.