ADVERTISEMENT

ಅಮಿತ್‌ ಶಾ– ಶರದ್‌ ಪವಾರ್‌ ಭೇಟಿ: ಮಹಾರಾಷ್ಟ್ರ ರಾಜಕೀಯದಲ್ಲಿ ಮನೆಮಾಡಿದ ಕುತೂಹಲ

‘ಇಂಥ ವಿಷಯ ಬಹಿರಂಗಪಡಿಸಬೇಕು ಎಂದೇನಿಲ್ಲ– ಅಮಿತ್‌ ಶಾ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 15:19 IST
Last Updated 28 ಮಾರ್ಚ್ 2021, 15:19 IST
   

ನವದೆಹಲಿ: ಎನ್‌ಸಿಪಿ ವರಿಷ್ಠ ಶರದ್‌ ಪವಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಇದು ಈಗ ಚರ್ಚೆಗೆ ಗ್ರಾಸವಾಗಿದೆ.

ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದ ನಂತರ, ಮೈತ್ರಿ ಸರ್ಕಾರದ ಅಂಗ ಪಕ್ಷಗಳಾದ ಶಿವಸೇನಾ ಹಾಗೂ ಎನ್‌ಸಿಪಿ ನಡುವೆ ಬಿರುಕು ಮೂಡುವ ಲಕ್ಷಣಗಳು ಗೋಚರಿಸುತ್ತಿವೆ. ಈ ನಡುವೆಯೇ, ಪವಾರ್‌ ಅವರು ಗೃಹ ಸಚಿವ ಶಾ ಅವರನ್ನು ಶನಿವಾರ ಭೇಟಿಯಾಗಿದ್ದಾರೆ ಎಂಬ ವಿಷಯ ಕುತೂಹಲಕ್ಕೂ ಕಾರಣವಾಗಿದೆ.

ಅಹಮದಾಬಾದ್‌ನಲ್ಲಿ ನಡೆದ ಶರದ್‌ ಪವಾರ್‌– ಶಾ ಭೇಟಿ ವೇಳೆ ಎನ್‌ಸಿಪಿಯ ಮತ್ತೊಬ್ಬ ನಾಯಕ ಪ್ರಫುಲ್ ಪಟೇಲ್‌ ಸಹ ಉಪಸ್ಥಿತರಿದ್ದರು ಎನ್ನಲಾಗಿದೆ.

ADVERTISEMENT

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾ, ‘ಪ್ರತಿಯೊಂದು ವಿಷಯವನ್ನೂ ಬಹಿರಂಗಪಡಿಸಬೇಕು ಎಂದೇನಿಲ್ಲ’ ಎಂದರು. ಇನ್ನೊಂದೆಡೆ, ಪವಾರ್‌ ಮತ್ತು ತಮ್ಮ ನಡುವೆ ಮಾತುಕತೆ ನಡೆದಿದೆ ಎಂಬುದನ್ನೂ ಅವರು ನಿರಾಕರಿಸಲಿಲ್ಲ.

ಮುಂಬೈನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಎನ್‌ಸಿಪಿ ವಕ್ತಾರ ಹಾಗೂ ಮಹಾರಾಷ್ಟ್ರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ನವಾಬ್‌ ಮಲಿಕ್‌, ‘ಪವಾರ್‌ ಅವರು ಶಾ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿಲ್ಲ. ಇದು ನಿರಾಧಾರ’ ಎಂದು ಹೇಳಿದರು.

‘ಪಕ್ಷದ ವರಿಷ್ಠ ಶರದ್‌ ಪವಾರ್ ಅವರು ಎಲ್ಲ ಪಕ್ಷಗಳ ನಾಯಕರೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದಾರೆ’ ಎಂದೂ ಹೇಳಿದರು.

ಉದ್ಯಮಿ ಮುಕೇಶ್‌ ಅಂಬಾನಿ ನಿವಾಸದ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆಯಾದ ನಂತರ ಹಿರಿಯ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರನ್ನು ಎನ್‌ಐಎ ಬಂಧಿಸಿ, ವಿಚಾರಣೆ ನಡೆಸುತ್ತಿದೆ. ಗೃಹ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಪರಮ್‌ ಬೀರ್‌ ಸಿಂಗ್ ಅವರನ್ನು ಮುಂಬೈ ಪೊಲೀಸ್‌ ಕಮಿಷನರ್‌ ಹುದ್ದೆಯಿಂದ ಎತ್ತಂಗಡಿ ಮಾಡಲಾಯಿತು. ಈ ಬೆಳವಣಿಗೆಗಳು ಸಹ ಶಿವಸೇನಾ ನೇತೃತ್ವದ ಮೈತ್ರಿಕೂಟದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಲು ಕಾರಣವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.