ADVERTISEMENT

ಮೇಘಾಲಯ ‘ಹನಿಮೂನ್‌’ ಹತ್ಯೆ ಕೇಸ್‌: ಪ್ರಕರಣ ಭೇದಿಸಲು ನೆರವಾದ ಟೂರಿಸ್ಟ್ ಗೈಡ್‌

ಪಿಟಿಐ
Published 10 ಜೂನ್ 2025, 7:49 IST
Last Updated 10 ಜೂನ್ 2025, 7:49 IST
   

ಶಿಲ್ಲಾಂಗ್: ಮೇಘಾಲಯದಲ್ಲಿ ನಡೆದ ಉದ್ಯಮಿ ರಾಜ ರಘುವಂಶಿ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸುವಲ್ಲಿ ಅಲ್ಲಿನ ಪೊಲೀಸರಿಗೆ ಸ್ಥಳೀಯ ಪ್ರವಾಸಿ ಮಾರ್ಗದರ್ಶಕರೊಬ್ಬರು(ಟೂರಿಸ್ಟ್ ಗೈಡ್‌) ನೀಡಿದ ಸಣ್ಣ ಸುಳಿವೊಂದು ನೆರವಾಗಿದೆ.

ಮೇಘಾಲಯಕ್ಕೆ ಹನಿಮೂನ್‌ಗೆ ಬಂದಿದ್ದ ಇಂದೋರ್‌ನ ದಂಪತಿ ಮೇ 23ರಂದು ಕಾಣೆಯಾಗಿದ್ದರು. ಪತಿ ರಾಜ ರಘುವಂಶಿ ಅವರ ಶವ ಜೂನ್‌ 2ರಂದು ಕಮರಿಯೊಂದರಲ್ಲಿ ಸಿಕ್ಕಿತ್ತು. ಪತ್ನಿ ಸೋನಮ್‌ಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ, ದಂಪತಿಯೊಂದಿಗೆ ಮೂವರು ಪುರುಷರು ಇದ್ದ ಮಾಹಿತಿಯನ್ನು ಪ್ರವಾಸಿ ಮಾರ್ಗದರ್ಶಿ ಆಲ್ಬರ್ಟ್ ಪಿಡಿ ತಿಳಿಸಿದ್ದರು.

‘ಮೇ 23ರ ಬೆಳಿಗ್ಗೆ 10 ಗಂಟೆಯ ವೇಳೆ ನೊಂಗ್ರಿಯಾಟ್‌ ಬಳಿ ದಂಪತಿಯೊಂದಿಗೆ ಮೂವರು ಪುರುಷರು ಇರುವುದನ್ನು ನಾನು ನೋಡಿದ್ದೆ. ರಾಜ ರಘುವಂಶಿ ಸೇರಿ ನಾಲ್ವರು ‍ಪುರುಷರು ಮೆಟ್ಟಿಲುಗಳನ್ನು ಹತ್ತುತ್ತಾ ಮುಂದೆ ನಡೆಯುತ್ತಿದ್ದರೆ, ಸೋನಮ್‌ ಅವರು ಹಿಂದೆ ಇದ್ದರು’ ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ADVERTISEMENT

ಈ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಬಂಧನವಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಆಲ್ಬರ್ಟ್, ‘ಅಪರಾಧಿಗಳು ಜೈಲು ಸೇರಿರುವುದು ಕೇಳಿ ಸಂತೋಷವಾಗಿದೆ. ಸೊಹ್ರಾದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲು ಪ್ರಯತ್ನಿಸಿದವರಿಗೆ ತಕ್ಕ ಶಿಕ್ಷೆಯಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.