ADVERTISEMENT

ಮೇಘಾಲಯ 'ಹನಿಮೂನ್' ಹತ್ಯೆ ಪ್ರಕರಣ: ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಸೋನಮ್

ಪಿಟಿಐ
Published 13 ಸೆಪ್ಟೆಂಬರ್ 2025, 10:09 IST
Last Updated 13 ಸೆಪ್ಟೆಂಬರ್ 2025, 10:09 IST
<div class="paragraphs"><p>ಸೋನಮ್</p></div>

ಸೋನಮ್

   

ಶಿಲ್ಲಾಂಗ್: ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ್ದ ವೇಳೆ ಪತಿ ರಾಜ ರಘುವಂಶಿ ಅವರನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಸೋನಮ್ ರಘುವಂಶಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಸೊಹ್ರಾ ಉಪವಿಭಾಗದ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ನಿಗದಿಪಡಿಸಿದೆ.

ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ತುಷಾರ್ ಚಂದ್ರ ಮಾತನಾಡಿ, ಶುಕ್ರವಾರ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಆದರೆ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಲು ಪ್ರಾಸಿಕ್ಯೂಷನ್ ಸಮಯ ಕೇಳಿದೆ ಎಂದಿದ್ದಾರೆ.

ರಾಜ ರಘುವಂಶಿ ಹತ್ಯೆ ಪ್ರಕರಣ ಸಂಬಂಧ ಸಲ್ಲಿಸಲಾದ ಆರೋಪ ಪಟ್ಟಿಯಲ್ಲಿ ದೋಷಗಳಿವೆ ಎಂದು ಸೋನಮ್‌ ಪರ ವಕೀಲರು ಪ್ರತಿಪಾದಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಇಂದೋರ್‌ ಮೂಲದ ಸಾರಿಗೆ ಉದ್ಯಮಿ ರಾಜ ರಘುವಂಶಿ, ಸೋನಮ್ ಅವರನ್ನು ಮೇ 11ರಂದು ವಿವಾಹವಾಗಿದ್ದರು. ಮಧುಚಂದ್ರಕ್ಕಾಗಿ ದಂಪತಿ ಮೇಘಾಲಯಕ್ಕೆ ತೆರಳಿದ್ದರು. ಮೇ 23ರಂದು ಇವರು ನಾಪತ್ತೆಯಾಗಿದ್ದರು. ಜೂನ್‌ 2ರಂದು ರಘುವಂಶಿ ಅವರ ಶವ ಶಿಲ್ಲಾಂಗ್‌ ಸಮೀಪದ ಜಲಪಾತದ ಕಮರಿಯಲ್ಲಿ ಪತ್ತೆಯಾಗಿತ್ತು.

ಬಳಿಕ ಪೊಲೀಸರು ಸೋನಮ್‌ಗಾಗಿ ಶೋಧ ಮುಂದುವರಿಸಿದ್ದರು. ಜೂನ್‌ 9ರಂದು ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿತ್ತು. ಉತ್ತರ ಪ್ರದೇಶದ ಗಾಜಿಪುರದ ನಂದಗಂಜ್ ಪೊಲೀಸ್‌ ಠಾಣೆಯಲ್ಲಿ ಸೋನಮ್ ಪೊಲೀಸರಿಗೆ ಶರಣಾಗಿದ್ದರು.

ಸೋನಮ್‌ ಮತ್ತು ಆಕೆಯ ಪ್ರಿಯಕರ ರಾಜ್‌ ಕುಶ್ವಾಹ ರಾಜ ರಘುವಂಶಿ ಹತ್ಯೆ‌‌ಗೆ ಯೋಜನೆ ರೂಪಿಸಿದ್ದರು ಎಂದು ಆರೋಪಿಸಲಾಗಿದೆ.

ಪ್ರಕರಣ ಸಂಬಂಧ ಸೋನಮ್‌, ಆಕೆಯ ಪ್ರಿಯಕರ ರಾಜ್‌ ಕುಶ್ವಾಹ, ವಿಶಾಲ್‌, ಆಕಾಶ್‌, ಆನಂದ್‌ ಸೇರಿದಂತೆ ಒಟ್ಟು 8 ಜನರನ್ನು ಪೊಲೀಸರು ಬಂಧಿಸಿದ್ದರು.

ಕಳೆದ ವಾರ, ಪೊಲೀಸರು ಆರೋಪಿಗಳ ​​ವಿರುದ್ಧ 790 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.