ADVERTISEMENT

ಚೋಕ್ಸಿ ಆಸ್ತಿ ಹಿಂದೆ ಅಕ್ರಮ ಹಣ

ಪಿಟಿಐ
Published 2 ಸೆಪ್ಟೆಂಬರ್ 2018, 19:30 IST
Last Updated 2 ಸೆಪ್ಟೆಂಬರ್ 2018, 19:30 IST
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ   

ನವದೆಹಲಿ: ವಜ್ರಾಭರಣ ಉದ್ಯಮಿ ಮೆಹುಲ್‌ ಚೋಕ್ಸಿ ಅಪಾರ ಮೌಲ್ಯದ ಆಸ್ತಿಯನ್ನು ಗಳಿಸಿದ್ದು ಅಕ್ರಮ ಹಣ ವರ್ಗಾವಣೆ ವ್ಯವಹಾರದಿಂದ ಎಂದು ಅಕ್ರಮ ಹಣ ವರ್ಗಾವಣೆ ತಡೆ ಪ್ರಾಧಿಕಾರ (ಪಿಎಂಎಲ್‌ಎ) ಹೇಳಿದೆ.

ಸದ್ಯ ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿರುವ ಚೋಕ್ಸಿಯ ಎಲ್ಲ ಸ್ಥಿರಾಸ್ತಿಗಳೂ ಸಂಸ್ಥೆಯ ವಶದಲ್ಲಿಯೇ ಇರಲಿ ಎಂದು ಪ್ರಾಧಿಕಾರ ಆದೇಶಿಸಿದೆ.

ಜಾರಿ ನಿರ್ದೇಶನಾಲಯ ದಾಖಲಿಸಿರುವ ಮೂಲ ದೂರಿನಲ್ಲಿ ತಿಳಿಸಿರುವಂತೆ ಮುಟ್ಟುಗೋಲು ಹಾಕಿಕೊಂಡಿರುವ ಎಲ್ಲ ಸ್ಥಿರಾಸ್ತಿಗಳು ಕೂಡ ಅಕ್ರಮ ಹಣ ವರ್ಗಾವಣೆ ದಂಧೆಯೊಂದಿಗೆ ಸಂಬಂಧ ಹೊಂದಿವೆ ಎಂದು ಪ್ರಾಧಿಕಾರದ ಸದಸ್ಯ ತುಷಾರ್‌ ಶಾ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಜಾರಿ ನಿರ್ದೇಶನಾಲಯದ ವಶದಲ್ಲಿರುವ ಈ ಎಲ್ಲ ಆಸ್ತಿಗಳ ಮೇಲೆ ಅಧಿಕಾರಿಗಳು ಸದ್ಯದಲ್ಲಿಯೇ ಸೂಚನಾ ಫಲಕ ಹಾಕಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

41 ಆಸ್ತಿಗಳ ಮೌಲ್ಯ ₹1,210 ಕೋಟಿ!
ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಚೋಕ್ಸಿಗೆ ಸೇರಿದ ಒಟ್ಟು 41 ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಇದುವರೆಗೆ ಮುಟ್ಟುಗೋಲು ಹಾಕಿಕೊಂಡಿದೆ.

ಇವುಗಳ ಒಟ್ಟು ಮೌಲ್ಯವೇ ₹1,210 ಕೋಟಿಯಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಮುಂಬೈನಲ್ಲಿರುವ 15 ಫ್ಲ್ಯಾಟ್‌, 17 ಕಚೇರಿ ಮತ್ತು ಕೋಲ್ಕತ್ತಾದಲ್ಲಿರುವ ಶಾಪಿಂಗ್‌ ಮಾಲ್‌ ಇದರಲ್ಲಿ ಸೇರಿವೆ.

ಹೈದರಾಬಾದ್‌ ಬಳಿಯ ರಂಗಾರೆಡ್ಡಿ ಜಿಲ್ಲೆಯಲ್ಲಿರುವ 170 ಎಕರೆ ವಿಸ್ತೀರ್ಣದಲ್ಲಿರುವ ಪಾರ್ಕ್‌ ಮೌಲ್ಯ ಸುಮಾರು ₹500 ಕೋಟಿ ಎಂದು ಅಂದಾಜಿಸಲಾಗಿದೆ.

ಅಲಿಬಾಗ್‌ನಲ್ಲಿರುವ ನಾಲ್ಕು ಎಕರೆ ತೋಟದ ಮನೆ (ಫಾರ್ಮ್‌ ಹೌಸ್‌) ಮಹಾರಾಷ್ಟ್ರದ ನಾಸಿಕ್‌, ನಾಗಪುರ, ಪನ್ವೆಲ್ ಮತ್ತು ತಮಿಳುನಾಡಿನ ವಿಲ್ಲುಪುರಂನಲ್ಲಿರುವ 231 ಎಕರೆ ಭೂಮಿಯನ್ನು ಜಾರಿ ನಿರ್ದೇಶನಾಲಯ ಇದೇ ಫೆಬ್ರುವರಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.