ಇಂಫಾಲ್: ಮೈತೇಯಿ ನಾಯಕರ ಬಂಧನ ಖಂಡಿಸಿ ಮಣಿಪುರದಲ್ಲಿ ಸೃಷ್ಟಿಯಾಗಿದ್ದ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಉದ್ವಿಗ್ನ ಪರಿಸ್ಥಿತಿ ಇನ್ನೂ ಮುಂದುವರೆದಿದೆ. ಪ್ರತಿಬಂಧಕಾಜ್ಞೆಗಳನ್ನೂ ಉಲ್ಲಂಘಿಸಿ ಪ್ರತಿಭಟನಕಾರರು ಅಹೋರಾತ್ರಿ ಪಂಜಿನ ಮೆರವಣಿಗೆ ನಡೆಸಿದ್ದಾರೆ. ಸರ್ಕಾರಿ ಕಚೇರಿಗಳನ್ನು ಸುಟ್ಟುಹಾಕಿದ್ದಾರೆ. ಭದ್ರತಾ ಸಿಬ್ಬಂದಿ ಜತೆಗೂ ಘರ್ಷಣೆ ನಡೆಸಿದ್ದಾರೆ.
ಭಾನುವಾರ ರಾತ್ರಿ ಮತ್ತು ಸೋಮವಾರವೂ ಭಾರಿ ಪ್ರತಿಭಟನೆಗಳಿಗೆ ಮಣಿಪುರ ಸಾಕ್ಷಿಯಾಗಿದೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಕ್ವಾಕೈತೆಲ್ ಮತ್ತು ಸಿಂಗ್ಜಮೇಯಿಯಲ್ಲಿ ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಸಂಘರ್ಷ ನಡೆದಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹಲವು ಸುತ್ತು ಅಶ್ರುವಾಯು ಸಿಡಿಸಿದ್ದಾರೆ. ಪ್ರತಿಭಟನಕಾರರನ್ನು ಚದುರಿಸಲು ರಬ್ಬರ್ ಗುಂಡುಗಳನ್ನು ಹಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಸರ್ಕಾರಿ ಕಚೇರಿಗಳಿಗೆ ಬೆಂಕಿ: ‘ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಯೈರಿಪೋಕ್ ಟುಲಿಹಾಲ್ ಉಪ ವಿಭಾಗಾಧಿಕಾರಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಮಹತ್ವದ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಹಿಂಸೆ ನಿಯಂತ್ರಿಸಲು ಭದ್ರತೆ ಹೆಚ್ಚಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸೆಕ್ಮಾಯಿ ಮತ್ತು ಕೋಯಿರೆಂಗಾಯಿಯಲ್ಲಿ ಭದ್ರತಾ ಸಿಬ್ಬಂದಿ ಸಂಚರಿಸದಂತೆ ಹೋರಾಟಗಾರರು ರಸ್ತೆಗಳಿಗೆ ಮಣ್ಣಿನ ರಾಶಿ ಸುರಿದರು. ಕೆಲವೆಡೆ ರಸ್ತೆಗಳಲ್ಲಿ ಟೈರ್ ಸುಡಲಾಗಿದೆ. ಸೋಮವಾರ ಬೆಳಗ್ಗೆಯೂ ಇಂಫಾಲ್‌ನ ರಸ್ತೆಗಳಲ್ಲಿ ಉರಿದು ಕರಕಲಾದ ಟೈರ್‌ಗಳಿಂದ ಹೊಗೆ ಹೊಮ್ಮುತ್ತಿರುವುದು ಕಂಡು ಬಂತು.
ಬಿದಿರು ಬೊಂಬು ಕಟ್ಟಿ ರಸ್ತೆ ತಡೆ: ಪ್ರತಿಭಟನಾಕಾರರು ಬಿದಿರಿನ ಬೊಂಬುಗಳನ್ನು ಅಡ್ಡಲಾಗಿ ಕಟ್ಟಿ ರಸ್ತೆಗಳನ್ನು ತಡೆದಿದ್ದಾರೆ. ಇಂಫಾಲ್ ವಿಮಾನ ನಿಲ್ದಾಣ ಸಂಪರ್ಕಿಸುವ ಟಿಡ್ಡಿಮ್ ರಸ್ತೆ ಸೇರಿ ಪ್ರಮುಖ ರಸ್ತೆಗಳು ಬಂದ್ ಆಗಿದ್ದವು. ಮಧ್ಯಾಹ್ನದ ನಂತರ ಅವುಗಳನ್ನು ತೆರವು ಮಾಡಲಾಗಿದೆ.
ಮಹಿಳೆಯರೂ ಪ್ರತಿಭಟನೆಯಲ್ಲಿ ಭಾಗಿ: ಕೂಡಲೇ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ತೆರವು ಮಾಡಿ ಸರ್ಕಾರ ರಚಿಸುವಂತೆ ಖುರೈನಲ್ಲಿ ನಡೆದ ಪಂಜಿನ ಮೆರವಣಿಗೆಯಲ್ಲಿ ಮಹಿಳಾ ಸಂಘಟನೆಗಳೂ ಪಾಲ್ಗೊಂಡಿದ್ದವು.
ಶನಿವಾರ ಮೈತೇಯಿ ಸಂಘಟನೆ ‘ಅರಂಬಾಯ್ ಟೆಂಗೋಲ್’ನ ನಾಯಕ ಕನನ್ ಸಿಂಗ್ ಮತ್ತು ನಾಲ್ವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಸುದ್ದಿ ಹರಡಿ ಹಿಂಸಾಚಾರ ಶುರುವಾಗಿತ್ತು. 2023ರ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಕನನ್ ಸಿಂಗ್ ಮತ್ತು ನಾಲ್ವರನ್ನು ಬಂಧಿಸಿರುವುದಾಗಿ ಸಿಬಿಐ ಭಾನುವಾರ ತಿಳಿಸಿತ್ತು.
ಇದನ್ನು ಖಂಡಿಸಿ ಮೈತೇಯಿ ಹೋರಾಟಗಾರರು ಹಿಂಸಾರೂಪದ ಪ್ರತಿಭಟನೆ ಆರಂಭಿಸಿದ್ದರು. ಹೀಗಾಗಿ ಪಶ್ಚಿಮ ಇಂಫಾಲ್, ಪೂರ್ವ ಇಂಫಾಲ್, ತೌಬಾಲ್, ಬಿಷ್ಣುಪುರ್, ಕಾಕ್‌ಚಿಂಗ್ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.