ನವದೆಹಲಿ: ವಕ್ಫ್ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿಯ ಸದಸ್ಯರು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಹೊಂದಿರುವ ಕರಡು ಶಾಸನಕ್ಕೆ 572 ತಿದ್ದುಪಡಿಗಳನ್ನು ಸೂಚಿಸಿದ್ದಾರೆ.
ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ ಅಧ್ಯಕ್ಷತೆಯ ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಮಿತಿಯು ಭಾನುವಾರ ತಡರಾತ್ರಿ ತಿದ್ದುಪಡಿಗಳ ಕ್ರೋಢೀಕೃತ ಪಟ್ಟಿಯನ್ನು ಪ್ರಕಟಿಸಿದೆ.
ಸಮಿತಿಯು ಸೋಮವಾರದ ತನ್ನ ಸಭೆಯಲ್ಲಿ ಕಲಂವಾರು ತಿದ್ದುಪಡಿಗಳನ್ನು ಚರ್ಚಿಸುತ್ತದೆ.
ಬಿಜೆಪಿ ಮತ್ತು ವಿರೋಧ ಪಕ್ಷಗಳ ಸದಸ್ಯರು ಮಸೂದೆಗೆ ತಿದ್ದುಪಡಿಗಳನ್ನು ಸಲ್ಲಿಸಿದ್ದಾರೆ. ಆದರೆ, ತಿದ್ದುಪಡಿಗಳನ್ನು ಸಲ್ಲಿಸಿದ ಸದಸ್ಯರ ಪಟ್ಟಿಯಲ್ಲಿ ಬಿಜೆಪಿಯ ಮಿತ್ರಪಕ್ಷಗಳ ಸದಸ್ಯರು ಯಾರೂ ಇಲ್ಲ.
ವಕ್ಫ್ ತಿದ್ದುಪಡಿ ಮಸೂದೆ, 2024 ಅನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಂಡಿಸಿದ್ದರು. ಮಸೂದೆಯ ಕೆಲ ವಿಷಯಗಳ ಕುರಿತ ಆಕ್ಷೇಪ ವ್ಯಕ್ತವಾಗಿದ್ದರಿಂದ ಆಗಸ್ಟ್ 8ರಂದು ಸಂಸತ್ತಿನ ಜಂಟಿ ಸಮಿತಿಗೆ ಶಿಫಾರಸು ಮಾಡಲಾಗಿತ್ತು.
ವಕ್ಫ್ ಆಸ್ತಿಗಳ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿನ ಸಮಸ್ಯೆಗಳು ಹಾಗೂ ಸವಾಲುಗಳನ್ನು ಪರಿಹರಿಸಲು 1995ರ ವಕ್ಫ್ ಕಾಯ್ದೆಯಯನ್ನು ತಿದ್ದುಪಡಿ ಮಾಡುವ ಗುರಿಯನ್ನು ಈ ಮಸೂದೆ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.