ADVERTISEMENT

ಪರೀಕ್ಷೆ ಬರೆಯುವ ವೇಳೆ ಮುಟ್ಟು ಆರಂಭ: ವಿದ್ಯಾರ್ಥಿನಿಗೆ ಪ್ಯಾಡ್‌ ನೀಡಲು ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 0:26 IST
Last Updated 27 ಜನವರಿ 2025, 0:26 IST
   

ಲಖನೌ: ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಮುಟ್ಟು ಆರಂಭವಾದ ವಿದ್ಯಾರ್ಥಿನಿಯೊಬ್ಬರಿಗೆ ಸ್ಯಾನಿಟರಿ ಪ್ಯಾಡ್‌ ನೀಡದೆ, ಪರೀಕ್ಷೆ ಬರೆಯಲೂ ಬಿಡದೆ, ಪ್ರಾಂಶುಪಾಲರ ಕಚೇರಿ ಎದುರು ಒಂದು ತಾಸು ನಿಲ್ಲಿಸಿ, ನಂತರ ಮನೆಗೆ ಕಳುಹಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆಯರಿಗಾಗಿಯೇ ಇರುವ ಖಾಸಗಿ ಕಾಲೇಜುವೊಂದರಲ್ಲಿ ಶನಿವಾರ ಈ ಘಟನೆ ನಡೆದಿದೆ. ಪ್ರಾಂಶುಪಾಲರ ಕಚೇರಿ ಎದುರು ನಿಂತಿರುವಾಗಲೂ ರಕ್ತಸ್ರಾವವಾಗುತ್ತಿದ್ದ ವಿದ್ಯಾರ್ಥಿನಿಯ ಬಟ್ಟೆಯೆಲ್ಲ ಕಲೆಗಳಾಗಿದ್ದವು. ಇದೇ ಬಟ್ಟೆಯಲ್ಲಿಯೇ ವಾಪಸು ಮನೆಗೆ ತೆರಳಿದ ಆಕೆಗೆ ಅವಮಾನವಾಗಿದೆ ಎಂದು ವಿದ್ಯಾರ್ಥಿನಿಯ ಪೋಷಕರು ದೂರಿದ್ದಾರೆ. ‘ಆಕೆಯನ್ನು ಈ ಸ್ಥಿತಿಗೆ ತಂದ ಶಿಕ್ಷಕರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು ಘಟನೆ ಸಂಬಂಧ ಜಿಲ್ಲಾ ಶಿಕ್ಷಣ ಅಧಿಕಾರಿಗೆ ದೂರು ನೀಡಿದ್ದಾರೆ.

‘ನಮ್ಮದು ಹೆಣ್ಣುಮಕ್ಕಳದ್ದೇ ಕಾಲೇಜು. ಇಲ್ಲಿ ಎಲ್ಲ ಶಿಕ್ಷಕಿಯರ ಹತ್ತಿರವೂ ಸ್ಯಾನಿಟರಿ ಪ್ಯಾಡ್‌ಗಳಿವೆ. ಯಾಕಾಗಿ ಆಕೆಗೆ ಪ್ಯಾಡ್‌ ನೀಡಲಿಲ್ಲ ಎಂದು ತನಿಖೆ ನಡೆಸುತ್ತಿದ್ದೇವೆ. ನನಗೆ ವಿಷಯ ತಿಳಿಯುವ ಹೊತ್ತಿಗೆ ವಿದ್ಯಾರ್ಥಿನಿಯು ಮನೆಗೆ ವಾಪಸು ಹೋಗಿದ್ದಳು’ ಎಂದು ಪ್ರಾಂಶುಪಾಲರಾದ ರಚನಾ ಅರೋರಾ
ಪ್ರತಿಕ್ರಿಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.