ADVERTISEMENT

ವಿಜಯವಾಡ ಸರ್ಕಾರಿ ಆಸ್ಪತ್ರೆ: ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ವಿಜಯವಾಡ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಕೃತ್ಯ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 16:22 IST
Last Updated 22 ಏಪ್ರಿಲ್ 2022, 16:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯವಾಡ: ಮಾನಸಿಕ ಅಸ್ವಸ್ಥ ಮಹಿಳೆಯನ್ನು ಆಸ್ಪತ್ರೆಯ ಸಣ್ಣ ಕೊಠಡಿಯಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ವಿಜಯವಾಡ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಘಟನೆ ನಡೆದ 30 ಗಂಟೆಗಳ ಬಳಿಕ ಸಂತ್ರಸ್ತೆಯ ಸುಳಿವು ಪತ್ತೆಯಾಗಿದೆ.

ಈ ಕೃತ್ಯವೆಸಗಿದ ಗುತ್ತಿಗೆ ನೌಕರರರಾದ ಡಾರ ಶ್ರೀಕಾಂತ್, ಚೆನ್ನಬಾಬು ರಾವ್ ಮತ್ತು ಜೆ.ಪವನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಏಪ್ರಿಲ್ 19ರ ರಾತ್ರಿ ಡಾರ ಶ್ರೀಕಾಂತ್ ಎಂಬ ಆರೋಪಿಯು, ವಿಜಯವಾಡದ ವಾಂಬೆ ಕಾಲೋನಿಯ 23 ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ಕರೆತಂದು, ಲಿಫ್ಟ್ ಪಕ್ಕದಲ್ಲಿರುವ ಸಣ್ಣ ಕೊಠಡಿಯಲ್ಲಿ ಕೂಡಿಹಾಕಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಮಾರನೇ ದಿನ ಇದೇ ಕೊಠಡಿಯಲ್ಲಿ ಮತ್ತಿಬ್ಬರು ಆರೋಪಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಮ್ಮ ಪುತ್ರಿ ಕಾಣೆಯಾಗಿದ್ದರ ಬಗ್ಗೆ ದೂರು ಸಲ್ಲಿಸಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಏಪ್ರಿಲ್ 20ರ ರಾತ್ರಿ ಸಂತ್ರಸ್ತೆಯ ಪೋಷಕರೇ ಸ್ವತಃ ಆಸ್ಪತ್ರೆಗೆ ಹೋಗಿದ್ದು, ಆಗ ತಮ್ಮ ಪುತ್ರಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದನ್ನು ಕಂಡಿದ್ದಾಗಿ ಹೇಳಿದ್ದಾರೆ.

ADVERTISEMENT

ಏಪ್ರಿಲ್ 20ರಂದು ಸಂತ್ರಸ್ತೆಯ ಪೋಷಕರು ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ತ್ವರಿತ ಕಾರ್ಯಾಚರಣೆ ಕೈಗೊಂಡು ಸಂತ್ರಸ್ತೆ ಜೊತೆ ಮಾತನಾಡಿದ್ದ ಆರೋಪಿಯ ಮೊಬೈಲ್ ಸಂಖ್ಯೆಯನ್ನು ಪತ್ತೆ ಹಚ್ಚಿದೆವು. ಇದರಿಂದ ಸಂತ್ರಸ್ತೆ ಆಸ್ಪತ್ರೆಯಲ್ಲಿ ಇರುವುದು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಕರ್ತವ್ಯ ಲೋಪದಹಿನ್ನೆಲೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಹನಿಶ್ ಕುಮಾರ್ ಮತ್ತು ಎಸ್ಐ ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಸರ್ಕಾರದ ವೈಫಲ್ಯವೇ ಈ ಘಟನೆಗೆ ಕಾರಣ ಎಂದು ವಾಗ್ದಾಳಿ ನಡೆಸಿದರು.

ಏತನ್ಮಧ್ಯೆ, ಸಂತ್ರಸ್ತೆಯ ಕುಟುಂಬಕ್ಕೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ₹10 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.