ADVERTISEMENT

ಕೋವಿಡ್ ಸಾವಿನ ಅಪಾಯ ತಗ್ಗಿಸುವ ಮಾತ್ರೆ, ಪ್ರಯೋಗದಲ್ಲಿ ದೃಢ: ಮರ್ಕ್ ಸಂಸ್ಥೆ

ಏಜೆನ್ಸೀಸ್
Published 1 ಅಕ್ಟೋಬರ್ 2021, 15:30 IST
Last Updated 1 ಅಕ್ಟೋಬರ್ 2021, 15:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್: ಪ್ರಾಯೋಗಿಕ ಕೋವಿಡ್ -19 ಮಾತ್ರೆಯು ಕೊರೊನಾ ವೈರಸ್ ಸೋಂಕಿಗೆ ಒಳಗಾದ ಜನರಲ್ಲಿ ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಸಾಧ್ಯತೆಯನ್ನು ಅರ್ಧದಷ್ಟು ಕಡಿಮೆ ಮಾಡಿದೆ ಎಂದು ಔಷಧ ತಯಾರಿಕಾ ಕಂಪನಿ ಮರ್ಕ್ & ಕೋ ಶುಕ್ರವಾರ ಹೇಳಿದೆ.

ಈ ಮಾತ್ರೆಯನ್ನು ಕೋವಿಡ್ ರೋಗಿಗಳ ಬಳಕೆಗೆ ಅಧಿಕೃತಗೊಳಿಸಲು ಅಮೆರಿಕ ಮತ್ತು ಪ್ರಪಂಚದಾದ್ಯಂತದ ಇರುವ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸುವುದಾಗಿ ಹೇಳಿದೆ.

ಒಂದೊಮ್ಮೆ ಈ ಮಾತ್ರೆಗೆ ಅನುಮೋದನೆ ಸಿಕ್ಕರೆ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ ಪ್ರಮುಖ ಮುನ್ನಡೆಯಾಗಲಿದೆ. ಕೋವಿಡ್ -19 ಗೆ ಚಿಕಿತ್ಸೆ ನೀಡಬಹುದಾದದ ಮೊದಲ ಮಾತ್ರೆಯಾಗಲಿದೆ. ಅಮೆರಿಕದಲ್ಲಿ ಈಗ ಅಧಿಕೃತವಾಗಿರುವ ಎಲ್ಲಾ ಕೋವಿಡ್ -19 ಚಿಕಿತ್ಸೆಗೆ ಬಳಸುವ ಔಷಧಕ್ಕೆ ಐವಿ ಅಥವಾ ಇಂಜೆಕ್ಷನ್ ಅಗತ್ಯವಿದೆ.

ADVERTISEMENT

ಮೊಲ್ನುಪಿರವಿರ್ ಎಂದು ಕರೆಯಲ್ಪಡುವ ಈ ಮಾತ್ರೆಯನ್ನು ಪಡೆದ ರೋಗಿಗಳಲ್ಲಿ ಕೋವಿಡ್ -19 ರೋಗಲಕ್ಷಣಗಳು ಐದು ದಿನಗಳೊಳಗೆ ಕಡಿಮೆ ಆಗಿದ್ದು, ಅರ್ಧದಷ್ಟು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ಮರ್ಕ್ ಮತ್ತು ಅದರ ಪಾಲುದಾರ ರಿಡ್ಜ್‌ಬ್ಯಾಕ್ ಬಯೋಥೆರಪೆಟಿಕ್ಸ್ ಸಂಸ್ಥೆ ಹೇಳಿದೆ.

ಸ್ಥೂಲಕಾಯ, ಮಧುಮೇಹ ಅಥವಾ ಹೃದ್ರೋಗದಂತಹ ಆರೋಗ್ಯ ಸಮಸ್ಯೆಗಳಿಂದಾಗಿ ಕೋವಿಡ್‌ನಿಂದ ಹೆಚ್ಚು ಅಪಾಯವೆಂದು ಪರಿಗಣಿಸಲ್ಪಟ್ಟ ಮಧ್ಯಮ ಪ್ರಮಾಣದ ಕೋವಿಡ್ -19 ಲಕ್ಷಣಗಳನ್ನು ಹೊಂದಿರುವ 775 ವಯಸ್ಕರ ಮೇಲೆ ಅಧ್ಯಯನ ನಡೆಸಲಾಗಿದೆ.

ಮೆರ್ಕ್ ಸಂಸ್ಥೆಯ ವರದಿಯನ್ನು ಸದ್ಯ ಯಾವುದೇ ಉನ್ನತ ವೈದ್ಯಕೀಯ ತಂಡ ಪರಿಶೀಲನೆ ನಡೆಸಿಲ್ಲ. ಭವಿಷ್ಯದ ವೈದ್ಯಕೀಯ ಪರಿಶೀಲನೆಯಲ್ಲಿ ಅದನ್ನು ಪ್ರಸ್ತುತಪಡಿಸಲು ಯೋಜಿಸಲಾಗಿದೆ ಎಂದು ಮರ್ಕ್ ಹೇಳಿದೆ.

ಪ್ರಯೋಗದ ಫಲಿತಾಂಶಗಳು ಪ್ರಬಲವಾಗಿರುವುದರಿಂದ ಸದ್ಯ ಮಾತ್ರೆಯ ಬಳಕೆ ನಿಲ್ಲಿಸುವಂತೆ ವೈದ್ಯಕೀಯ ತಜ್ಞರ ಸ್ವತಂತ್ರ ಗುಂಪು ಶಿಫಾರಸು ಮಾಡಿದೆ. ಮಾತ್ರೆಗೆ ಅನುಮೋದನೆ ನೀಡುವ ಕುರಿತಂತೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತದೊಂದಿಗೆ ಚರ್ಚಿಸುತ್ತಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಡೇಟಾವನ್ನು ಪರಿಶೀಲನೆಗಾಗಿ ಸಲ್ಲಿಸಲು ಯೋಜಿಸಿದ್ದೇವೆ ಎಂದು ಕಂಪನಿಯ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.