ADVERTISEMENT

ರಾಜಸ್ಥಾನದಲ್ಲಿ ಆಗಸದಿಂದ ಬಿದ್ದ ಹೊಳೆಯುವ ವಸ್ತು: ಸ್ಥಳೀಯರಲ್ಲಿ ಆತಂಕ

ಪಿಟಿಐ
Published 20 ಜೂನ್ 2020, 8:44 IST
Last Updated 20 ಜೂನ್ 2020, 8:44 IST
ರಾಜಸ್ಥಾನದ ಜಲೋರ್‌ ಜಿಲ್ಲೆಯಲ್ಲಿ ಆಗಸದಿಂದ ಬಿದ್ದ ವಸ್ತು
ರಾಜಸ್ಥಾನದ ಜಲೋರ್‌ ಜಿಲ್ಲೆಯಲ್ಲಿ ಆಗಸದಿಂದ ಬಿದ್ದ ವಸ್ತು    

ಜಲೋರ್‌: ರಾಜಸ್ಥಾನದ ಜಲೋರ್ ಜಿಲ್ಲೆಯ ಸಾಂಚೋರ್‌ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಆಕಾಶದಿಂದ ಬಿದ್ದ ಗುಂಡಗಿನ ವಸ್ತುವೊಂದು ಸ್ಥಳೀಯರಲ್ಲಿ ಭಯಭೀತಿ ಉಂಟು ಮಾಡಿದೆ.

ವಸ್ತು ಆಕಾಶದಿಂದ ಬಿದ್ದ ರಭಸಕ್ಕೆ ಸ್ಥಳದಲ್ಲಿ ಗುಂಡಿ ಸೃಷ್ಟಿಯಾಗಿದೆ. ಅಲ್ಲದೆ, ಭಾರಿ ಸದ್ದು ಉಂಟಾಗಿದೆ.

ಈ ಬಗ್ಗೆ ಮಾತನಾಡಿರುವ ಸಂಚೋರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಅರವಿಂದ್ ಪುರೋಹಿತ್, ‘ಸಾಂಚೋರ್‌ನ ಗಾಯತ್ರಿ ಕಾಲೇಜಿನ ಬಳಿ ಆಕಾಶದಿಂದ ಹೊಳೆಯುವ ವಸ್ತುವೊಂದು ಬಿದ್ದಿದೆ ಎಂಬ ಮಾಹಿತಿ ತಮಗೆ ಸಿಕ್ಕಿತು. ಸ್ಥಳಕ್ಕೆ ಹೋಗಿ ನೋಡಿದಾಗ ಐದರಿಂದ ಆರು ಅಂಗುಲದ ಗುಂಡಿಯಲ್ಲಿ ದುಂಡಗಿನ ಉಲ್ಕಾಶಿಲೆಯಂಥ ವಸ್ತುವನ್ನು ನಾವು ಕಂಡೆವು. ಬಿಸಿಯಾಗಿದ್ದ ಆ ವಸ್ತು 2.7 ಕೆಜಿ ತೂಕವಿತ್ತು. ಸದ್ಯ ಅದನ್ನು ಸಂರಕ್ಷಿಸಿಟ್ಟಿದ್ದೇವೆ,’ ಎಂದು ಹೇಳಿದ್ದಾರೆ.

ADVERTISEMENT

‘ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿಯನ್ನು ಸಲ್ಲಿಸಲಾಗಿದೆ. ವಸ್ತುವನ್ನು ಹೆಚ್ಚಿನ ಪರೀಕ್ಷೆಗಾಗಿ ಭೂ ವಿಜ್ಞಾನ ವಿಭಾಗಕ್ಕೆ ಹಸ್ತಾಂತರಿಸಲಾಗುವುದು,’ ಎಂದು ಸಂಚೋರ್ ತಾಲೂಕು ಅಧಿಕಾರಿ ಭೂಪೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.

ಏತನ್ಮಧ್ಯೆ, ಜೋಧಪುರದ ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗವು ವಸ್ತುವನ್ನು ಅಧ್ಯಯನ ಮಾಡಲು ಆಸಕ್ತಿ ತೋರಿದೆ.

‘ವಸ್ತುವಿನ ಬಗ್ಗೆ ಅಧ್ಯಯನ ನಡೆಸಲು ನಮಗೆ ಅವಕಾಶ ನೀಡುವಂತೆ ಜಲೋರ್ ಆಡಳಿತವನ್ನು ಕೋರಿದ್ದೇನೆ’ ಎಂದು ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಸುರೇಶ್ ಚಂದ್ರ ಮಾಥುರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.