ADVERTISEMENT

‘ಮೀ–ಟೂ’ ಪ್ರಕರಣ: ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ಎಂದ ಎಂ.ಜೆ. ಅಕ್ಬರ್

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್‌ ದೂರು

ಪಿಟಿಐ
Published 18 ಜನವರಿ 2021, 10:18 IST
Last Updated 18 ಜನವರಿ 2021, 10:18 IST
ಎಂ.ಜೆ. ಅಕ್ಬರ್‌
ಎಂ.ಜೆ. ಅಕ್ಬರ್‌   

ನವದೆಹಲಿ: ‘ನನ್ನ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಪತ್ರಕರ್ತೆ ಪ್ರಿಯಾ ರಮಣಿ ಅವರೇ ಮೊದಲು ಪ್ರಚೋದನೆ ನೀಡಿ ಆರೋಪಗಳನ್ನು ಮಾಡಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಒಳ್ಳೆಯ ಉದ್ದೇಶವೂ ಇಲ್ಲ’ ಎಂದು ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್‌ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ರವೀಂದ್ರ ಕುಮಾರ್‌ ಅವರ ಮುಂದೆ ಎಂ.ಜೆ. ಅಕ್ಬರ್‌ ಈ ವಾದ ಮಂಡಿಸಿದ್ದಾರೆ. ಹಿರಿಯ ವಕೀಲರಾದ ಗೀತಾ ಲುಥ್ರಾ ಅವರ ಮೂಲಕ ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.

‘ಲೈಂಗಿಕ ಕಿರುಕುಳದ ಆರೋಪವನ್ನು ನಾನೊಬ್ಬಳೇ ಮಾಡಿಲ್ಲ. ಹಲವರು ಆರೋಪ ಮಾಡಿದ್ದಾರೆ. ಆದರೆ, ನನ್ನ ವಿರುದ್ಧ ಮಾತ್ರ ಅಕ್ಬರ್‌ ಮಾನನಷ್ಟ ಮೊಕದ್ದಮೆ ದಾಖಲೆ ಹೂಡಿದ್ದಾರೆ’ ಎಂದು ರಮಣಿ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅಕ್ಬರ್‌ ಈ ವಾದ ಮಂಡಿಸಿದ್ದಾರೆ. ‘

ADVERTISEMENT

‘ಈ ಪ್ರಕರಣದ ಹಿಂದೆ ಯಾವುದೋ ಒಂದು ಉದ್ದೇಶವಿದೆ. ಇದು ದ್ವೇಷದಿಂದ ಕೂಡಿರುವ ಮತ್ತು ಪ್ರತೀಕಾರಕ್ಕಾಗಿ ಮಾಡಿರುವ ಆರೋಪಗಳಾಗಿವೆ. ಒಬ್ಬ ವ್ಯಕ್ತಿಯ ವರ್ಚಸ್ಸನ್ನು ಹಾಳು ಮಾಡುವ ಉದ್ದೇಶ ಇದಾಗಿದೆ’ ಎಂದು ಅಕ್ಬರ್‌ ಅವರ ವಕೀಲರಾದ ಗೀತಾ ಪ್ರತಿಪಾದಿಸಿದ್ದಾರೆ.

ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಜನವರಿ 23ಕ್ಕೆ ಮುಂದೂಡಿದೆ. 2018ರಲ್ಲಿ ಅಕ್ಬರ್ ವಿರುದ್ಧ ರಮಣಿ ಅವರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 2018ರ ಅಕ್ಟೋಬರ್‌ 15ರಂದು ರಮಣಿ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯನ್ನು ಅಕ್ಬರ್‌ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.