ADVERTISEMENT

ನಡ್ಡಾ ವಾಹನಗಳ ಮೇಲೆ ದಾಳಿ: ಮೂವರು ಐಪಿಎಸ್ ಅಧಿಕಾರಿಗಳು ಕೇಂದ್ರ ಸೇವೆಗೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 12:55 IST
Last Updated 12 ಡಿಸೆಂಬರ್ 2020, 12:55 IST
ಅಮಿತ್ ಶಾ, ಕೇಂದ್ರ ಗೃಹ ಸಚಿವ
ಅಮಿತ್ ಶಾ, ಕೇಂದ್ರ ಗೃಹ ಸಚಿವ   

ಕೋಲ್ಕತ್ತಾ: ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿ ಭದ್ರತೆಯ ಜವಾಬ್ದಾರರಾಗಿದ್ದ ಮೂವರು ಐಪಿಎಸ್ ಅಧಿಕಾರಿಗಳನ್ನ ಕೇಂದ್ರ ಗೃಹ ಇಲಾಖೆ, ಕೇಂದ್ರ ಸೇವೆಗೆ ವಾಪಸ್ ಕರೆಸಿಕೊಂಡಿದೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡ್ಡಾ ಅವರ ವಾಹನ, ಬೆಂಗಾವಲು ವಾಹನಗಳ ಮೇಲೆ ದಾಳಿ ಬಳಿಕ ಈ ಕೇಂದ್ರದಿಂದ ಈ ನಿರ್ಧಾರ ಹೊರಬಿದ್ದಿದೆ.

ಡೈಮಂಡ್ ಹಾರ್ಬರ್‌ನ ಪೊಲೀಸ್ ವರಿಷ್ಠಾಧಿಕಾರಿ ಬೋಲನಾಥ್ ಪಾಂಡೆ, ದಕ್ಷಿಣ ಬಂಗಾಳದ ಎಡಿಜಿಪಿ ರಾಜೀವ್ ಮಿಶ್ರಾ ಮತ್ತು ಪ್ರೆಸಿಡೆನ್ಸಿ ರೇಂಜ್‌ನ ಡಿಐಜಿ ಪ್ರವೀಣ್ ತ್ರಿಪಾಠಿ ಅವರನ್ನ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭದ್ರತೆಗೆ ನಿಯೋಜಿಸಲಾಗಿತ್ತು. ಆದರೂ, ಡೈಮಂಡ್ ಹಾರ್ಬರ್‌ನ ಶಿರೋಕಲ್‌ನಲ್ಲಿ ನಡ್ಡಾ ಅವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಹೀಗಾಗಿ, ಈ ಮೂವರನ್ನ ಕೇಂದ್ರ ಸೇವೆಗೆ ವಾಪಸ್ ಕರೆಸಿಕೊಳ್ಳಲಾಗಿದೆ.

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ತಯಾರಿಗಾಗಿ ನಡ್ಡಾ, ಪಶ್ಚಿಮ ಬಂಗಾಳ ರಾಜ್ಯಕ್ಕೆ ಎರಡು ದಿನಗಳ ಭೇಟಿ ಕೈಗೊಂಡಿದ್ದರು. ಇದರ ಭಾಗವಾಗಿ ಕಾರ್ಯಕರ್ತರ ಸಭೆಗೆ ತೆರಳುತ್ತಿದ್ದ ಸಂದರ್ಭ ಕಲ್ಲು ತೂರಾಟ ನಡೆಸಲಾಗಿತ್ತು. ಘಟನೆಯಲ್ಲಿ ಪಕ್ಷದ ಕೆಲ ಮುಖಂಡರು, ಕಾರ್ಯಕರ್ತರು ಗಾಯಗೊಂಡಿದ್ದರು. ಮಾಧ್ಯಮಗಳ ವಾಹನಗಳು ಸಹ ಜಖಂ ಆಗಿದ್ದವು. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಈ ಕಲ್ಲು ತೂರಾಟದ ವಿಡಿಯೋಗಳು ಟಿವಿಗಳಲ್ಲಿ ಪ್ರಸಾರವಾಗಿದ್ದವು.

ADVERTISEMENT

ಘಟನೆ ಕುರಿತಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತಂತೆ ವಿವರಣೆ ನೀಡಲು ಡಿಸೆಂಬರ್ 14ರಂದು ದೆಹಲಿಗೆ ಆಗಮಿಸುವಂತೆ ಕೇಂದ್ರ ಗೃಹ ಇಲಾಖೆಯು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಅಲಪನ್ ಬಂಡೋಪಾಧ್ಯಾಯ್ ಮತ್ತು ಡಿಜಿ‍ಪಿ ವೀರೇಂದ್ರ ಅವರಿಗೆ ಸೂಚಿಸಿದೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.