ADVERTISEMENT

ಭದ್ರತಾ ಲೋಪ: ಗೃಹ ಇಲಾಖೆ ದೊಡ್ಡ, ಕಠಿಣ ನಿರ್ಧಾರ ಕೈಗೊಳ್ಳಲಿದೆ– ಅನುರಾಗ್ ಠಾಕೂರ್

ಪಿಟಿಐ
Published 6 ಜನವರಿ 2022, 13:15 IST
Last Updated 6 ಜನವರಿ 2022, 13:15 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಯ ವೇಳೆ ಭದ್ರತಾ ಲೋಪದ ಬಗ್ಗೆ ಗೃಹ ಸಚಿವಾಲಯವು ಮಾಹಿತಿ ಸಂಗ್ರಹಿಸುತ್ತಿದೆ. ಆ ಕುರಿತಂತೆ ದೊಡ್ಡ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಕ್ರೀಡೆ, ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ

ಕೇಂದ್ರ ಸಂಪುಟ ಸಭೆಯ ಕುರಿತ ಪತ್ರಿಕಾಗೋಷ್ಠಿ ವೇಳೆ ಭದ್ರತಾ ಉಲ್ಲಂಘನೆಯ ವಿಷಯದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಠಾಕೂರ್, ಈ ನಿಟ್ಟಿನಲ್ಲಿ ಕೆಲವರು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ ಎಂದು ಹೇಳಿದರು.

‘ಘಟನೆ ಕುರಿತಂತೆ ಗೃಹ ಸಚಿವಾಲಯವು ಮಾಹಿತಿ ಸಂಗ್ರಹಿಸುತ್ತಿದ್ದು, ಕ್ರಮ ಕೈಗೊಳ್ಳಲಿದೆ. ಅದು ದೊಡ್ಡ ಮತ್ತು ಕಠಿಣ ನಿರ್ಧಾರವಾಗಿರಲಿದೆ’ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ದೇಶದ ನ್ಯಾಯಾಂಗ ವ್ಯವಸ್ಥೆಯು ಎಲ್ಲರಿಗೂ ನ್ಯಾಯವನ್ನು ನೀಡುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ ಮತ್ತು ಅಂತಹ ತಪ್ಪುಗಳು ಸಂಭವಿಸಿದಾಗ, ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಸಚಿವರು ಹೇಳಿದರು.

ಕ್ಯಾಬಿನೆಟ್ ಸಭೆ ಮತ್ತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯ ಜೊತೆಗೆ, ಗುರುವಾರ ಭದ್ರತೆ ಕುರಿತ ಸಂಪುಟ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ವಹಿಸಿದ್ದರು.

ಭದ್ರತಾ ಲೋಪದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಪ್ರಧಾನಿ ಮೋದಿ ಇಂದು ಭೇಟಿಯಾದರು.

ಬುಧವಾರ ಪಂಜಾಬ್‌ನ ಫಿರೋಜ್‌ಪುರದಲ್ಲಿ ಪ್ರತಿಭಟನಾಕಾರರು ನಡೆಸಿದ ದಿಗ್ಬಂಧನದಿಂದಾಗಿ ‘ಪ್ರಮುಖ ಭದ್ರತಾ ಲೋಪ’ದಲ್ಲಿ ಮೋದಿಯವರ ಬೆಂಗಾವಲು ಪಡೆ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿತ್ತು. ಬಳಿಕ, ರ್‍ಯಾಲಿ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗದೆ ಪ್ರಧಾನಿ ಪಂಜಾಬ್‌ನಿಂದ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.