ADVERTISEMENT

ವಲಸೆ ಕಾರ್ಮಿಕರು ಸಂತ್ರಸ್ತರು, ಅಪರಾಧಿಗಳಲ್ಲ: ಗುಜರಾತ್‌ ಹೈಕೋರ್ಟ್

ಲಾಕ್‌ಡೌನ್‌ ಅವಧಿಯಲ್ಲಿ ಬಂಧನಕ್ಕೊಳಗಾಗಿದ್ದ ಕಾರ್ಮಿಕರಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 15:53 IST
Last Updated 24 ಜೂನ್ 2020, 15:53 IST
ವಲಸೆ ಕಾರ್ಮಿಕರು  (ಕೃಪೆ: ಎಎಫ್‌ಪಿ)
ವಲಸೆ ಕಾರ್ಮಿಕರು (ಕೃಪೆ: ಎಎಫ್‌ಪಿ)   

ಅಹಮದಾಬಾದ್‌: ಲಾಕ್‌ಡೌನ್‌ ಸಂದರ್ಭದಲ್ಲಿ ಹೆಚ್ಚಿನ ವಲಸೆ ಕಾರ್ಮಿಕರು ಸಂತ್ರಸ್ತರಾಗಿದ್ದರೇ ಹೊರತು ಅಪರಾಧಿಗಳಾಗಿರಲಿಲ್ಲ ಎಂದು ಉಲ್ಲೇಖಿಸಿರುವ ಗುಜರಾತ್‌ ಹೈಕೋರ್ಟ್‌, ಐಐಎಂಎನಲ್ಲಿ ಪೊಲೀಸರು ಹಾಗೂ ವಲಸೆ ಕಾರ್ಮಿಕರ ನಡುವೆ ನಡೆದಿದ್ದ ಘರ್ಷಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕಟ್ಟಡ ಕಾರ್ಮಿಕರಿಗೆ ಜಾಮೀನು ನೀಡಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಮೇಲೆ ದಾಖಲಾದ ಪ್ರಕರಣಗಳನ್ನು ಆಯಾ ರಾಜ್ಯ ಸರ್ಕಾರಗಳು ಹಿಂಪಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿರುವುದನ್ನೂ ಹೈಕೋರ್ಟ್‌ ಉಲ್ಲೇಖಿಸಿದೆ. ಮಂಗಳವಾರ ಹೈಕೋರ್ಟ್‌ ಈ ಆದೇಶ ನೀಡಿದ್ದರೂ, ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಬುಧವಾರವೂ ಕಾರ್ಮಿಕರ ಬಿಡುಗಡೆ ಆಗಲಿಲ್ಲ.

ಮೇ 18ರಂದು ನಡೆದ ಘರ್ಷಣೆ ಪ್ರಕರಣದಲ್ಲಿ ವಸ್ತ್ರಾಪುರ್‌ ಪೊಲೀಸರು 35 ಕಾರ್ಮಿಕರನ್ನು ಬಂಧಿಸಿದ್ದರು. ಅಂದಾಜು 250 ಕಾರ್ಮಿಕರು ಐಐಎಂಎ ಒಳಗಡೆ ಹೊಸ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದರು. ಲಾಕ್‌ಡೌನ್‌ ಸಂದರ್ಭದಲ್ಲಿ ಊರಿಗೆ ಹೋಗಲು ಕಾರ್ಮಿಕರು ಹಲವು ಬಾರಿ ಬೇಡಿಕೆ ಇರಿಸಿದ್ದರು. ಬೇಡಿಕೆ ಈಡೇರದಾಗ ಕಾರ್ಮಿಕರು ತಾಳ್ಮೆ ಕಳೆದುಕೊಂಡಿದ್ದರು. ಬಂಧನಕ್ಕೊಳಗಾದ ಕಾರ್ಮಿಕರಲ್ಲಿ ಹಲವರು ಜಾರ್ಖಂಡ್‌ ಮೂಲದವರಾಗಿದ್ದು, ಜಾಮೀನು ಕೋರಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಇಬ್ಬರಲ್ಲಿ ಕೋವಿಡ್‌–19 ದೃಢಪಟ್ಟಿತ್ತು.

ADVERTISEMENT

‘ಕಾರ್ಮಿಕರು, ಲಾಕ್‌ಡೌನ್‌ ಅವಧಿಯಲ್ಲಿ ಯಾವುದೇ ಕೆಲಸವಿಲ್ಲದೆ, ಹಣ, ಊಟ–ತಿಂಡಿ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಇಂಥ ಸಂದರ್ಭದಲ್ಲಿ ಅವರನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡದೆ ಜೈಲಿಗೆ ಹಾಕಲಾಗಿದೆ. ಇವರು ಅಪರಾಧಿಗಳಲ್ಲ, ಬದಲಾಗಿ ಸಂತ್ರಸ್ತರು. ಇವರು ಪೊಲೀಸ್‌ ವಶದಲ್ಲಿ ಇರುವ ಅವಶ್ಯಕತೆ ಇಲ್ಲ. ವೈಯಕ್ತಿಕ ಬಾಂಡ್‌ ಹೊರತುಪಡಿಸಿ ಇನ್ಯಾವುದೇ ಷರತ್ತುಗಳನ್ನು ಹಾಕದೆ ತಕ್ಷಣವೇ ಅವರನ್ನು ಬಂಧಮುಕ್ತಗೊಳಿಸಬೇಕು’ ಎಂದು ನ್ಯಾಯಮೂರ್ತಿ ಪರೇಶ್‌ ಉಪಾಧ್ಯಾಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.