ADVERTISEMENT

ಬಿರಿಯಾನಿ ತಿಂದು ಹಕ್ಕಿ ಜ್ವರ ಹರಡುವ ಸಂಚು: ಬಿಜೆಪಿ ಶಾಸಕನಿಂದ ರೈತರ ವ್ಯಂಗ್ಯ

ಏಜೆನ್ಸೀಸ್
Published 10 ಜನವರಿ 2021, 4:29 IST
Last Updated 10 ಜನವರಿ 2021, 4:29 IST
ರಾಜಸ್ಥಾನ ಬಿಜೆಪಿ ಶಾಸಕ ಮದನ್‌ ದಿಲಾವರ್‌
ರಾಜಸ್ಥಾನ ಬಿಜೆಪಿ ಶಾಸಕ ಮದನ್‌ ದಿಲಾವರ್‌   

ಕೋಟಾ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ಕೋಳಿ ಮಾಂಸದ ಬಿರಿಯಾನಿ ತಿನ್ನುವ ಮೂಲಕ ಹಕ್ಕಿ ಜ್ವರ ಹರಡುವ ಹುನ್ನಾರ ನಡೆಸಿದ್ದಾರೆ ಎಂದು ರಾಜಸ್ಥಾನ ಬಿಜೆಪಿ ಶಾಸಕ ಮದನ್‌ ದಿಲಾವರ್‌ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ.

ದೇಶವನ್ನು ನಾಶ ಮಾಡಲು ಬಯಸುತ್ತಿರುವ ಉಗ್ರರು ಮತ್ತು ದರೋಡೆಕೋರರು ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸೇರಿಕೊಂಡಿರಬಹುದು ಎಂದು ಅವರು ತಿಳಿಸಿದ್ದಾರೆ.

ರೈತರು ಎಂದು ಕರೆಸಿಕೊಳ್ಳುವವರಿಗೆ ದೇಶದ ಬಗ್ಗೆ ಚಿಂತೆ ಇಲ್ಲ. ಅವರೀಗ ಪಿಕ್ನಿಕ್‌ನಲ್ಲಿದ್ದಾರೆ ಮತ್ತು ಐಷಾರಾಮಿ ಸೌಕರ್ಯಗಳನ್ನು ಅನುಭವಿಸುತ್ತಿದ್ದಾರೆ ಎಂದು ಮದನ್‌ ದಿಲಾವರ್‌ ಆರೋಪಿಸಿದ್ದಾರೆ.

ADVERTISEMENT

ಈ ಸಂಬಂಧ ವಿಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, 'ಹೋರಾಟದ ಸ್ಥಳಗಳಲ್ಲಿ ಕೋಳಿಮಾಂಸವನ್ನು ಸೇವಿಸಲಾಗುತ್ತಿದೆ. ಆ ಮೂಲಕ ಹಕ್ಕಿ ಜ್ವರವನ್ನು ಹರಡಲು ಪ್ರತಿಭಟನಾಕಾರರು ಸಂಚು ರೂಪಿಸುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ.

ರಾಜಸ್ಥಾನದ ಕೋಟಾ ಜಿಲ್ಲೆಯ ರಾಮಗಂಜ್‌ಮಂಡಿ ಶಾಸಕರಾಗಿರುವ ಮದನ್‌ ದಿಲಾವರ್‌ ನೀಡಿರುವ ಈ ಹೇಳಿಕೆಗೆ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

'ಮದನ್‌ ದಿಲಾವರ್‌ ಹೇಳಿಕೆ ನಾಚಿಕೆಗೇಡಿನಿಂದ ಕೂಡಿದೆ. ಇದು ಬಿಜೆಪಿಯ ಸಿದ್ದಾಂತವನ್ನು ಪ್ರತಿಬಿಂಬಿಸುತ್ತದೆ' ಎಂದು ರಾಜಸ್ಥಾನ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಗೋವಿಂದ್‌ ಸಿಂಗ್ ದೊತ್ಸಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.