ADVERTISEMENT

ಒಳ್ಳೆಯತನ ಅಲ್ಲ, ಜಿನೀವಾ ಒಪ್ಪಂದ ಪಾಲನೆ: ಹಿರಿಯ ಅಧಿಕಾರಿಗಳ ಸ್ಪಷ್ಟ ನುಡಿ

ಭೂಸೇನೆ, ವಾಯುಪಡೆ, ನೌಕಾಪಡೆಯ ಹಿರಿಯ ಅಧಿಕಾರಿಗಳ ಹೇಳಿಕೆ

ಪಿಟಿಐ
Published 28 ಫೆಬ್ರುವರಿ 2019, 20:15 IST
Last Updated 28 ಫೆಬ್ರುವರಿ 2019, 20:15 IST
ಪಾಕ್ ಕ್ಷಿಪಣಿಯ ತುಣುಕುಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಲಾಯಿತು–ಎಎಫ್‌ಪಿ ಚಿತ್ರ
ಪಾಕ್ ಕ್ಷಿಪಣಿಯ ತುಣುಕುಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಲಾಯಿತು–ಎಎಫ್‌ಪಿ ಚಿತ್ರ   

ನವದೆಹಲಿ:‌ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಬಿಡುಗಡೆಗೆ ಪಾಕಿಸ್ತಾನ ನಿರ್ಧರಿಸುವುದು ಸ್ವಾಗತಾರ್ಹ ಎಂದು ವಾಯುಪಡೆಯ ಉಪ ಮುಖ್ಯಸ್ಥ ಆರ್‌.ಜಿ.ಕೆ. ಕಪೂರ್ ಅವರು ಹೇಳಿದ್ದಾರೆ. ಇದು ಪಾಕಿಸ್ತಾನದ ಒಳ್ಳೆಯತನ ಎಂಬುದನ್ನು ಒಪ್ಪದ ಅವರು, ಜಿನೀವಾ ಒಪ್ಪಂದದ ಪಾಲನೆಯಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

ಭೂಸೇನೆ, ವಾಯುಸೇನೆ ಹಾಗೂ ನೌಕಾದಳದ ಹಿರಿಯ ಅಧಿಕಾರಿಗಳು ದೆಹಲಿಯಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದರು.

‘ಅಭಿನಂದನ್ ಬಿಡುಗಡೆಯಾಗುತ್ತಿರುವುದು ಖುಷಿತಂದಿದೆ. ಅವರ ಬರುವಿಕೆಯನ್ನು ಎದುರು ನೋಡುತ್ತಿದ್ದೇನೆ’ ಎಂದು ಕಪೂರ್ ಅವರು ಹೇಳಿದ್ದಾರೆ.

ADVERTISEMENT

ಬಾಲಾಕೋಟ್ ದಾಳಿಯ ಸಾಕ್ಷ್ಯಾಧಾರಗಳನ್ನು ಹೇಗೆ ಮತ್ತು ಎಲ್ಲಿ ಬಿಡುಗಡೆ ಮಾಡಬೇಕು ಎಂಬುದು ರಾಜಕೀಯ ನಾಯಕರಿಗೆ ಬಿಟ್ಟ ವಿಚಾರ ಎಂದೂ ಅವರು ಸ್ಪಷ್ಟಪಡಿಸಿದರು.

ನಿಗದಿತ ಸ್ಥಳದಲ್ಲೇ ದಾಳಿ ನಡೆದಿದೆ ಎಂಬ ಬಗ್ಗೆ ಸಂದೇಹಗಳಿವೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಪೂರ್, ‘ನಾವು ಗುರುತಿಸಿದ್ದ ಸ್ಥಳದ ಮೇಲೆಯೇ ದಾಳಿ ನಡೆಸಿದ್ದೇವೆ ಎಂಬುದಕ್ಕೆ ನಂಬಲರ್ಹ ಮಾಹಿತಿ ಹಾಗೂ ಸಾಕ್ಷ್ಯಗಳಿವೆ. ಹಾನಿ ಹಾಗೂ ಸಾವಿನ ಪ್ರಮಾಣ ನಿರ್ಣಯಿಸುವುದು ಕಷ್ಟ’ ಎಂದಿದ್ದಾರೆ.

ಪಾಕಿಸ್ತಾನದ ವಾಯುಪಡೆ ವಿಮಾನಗಳಿಗೆ ಭಾರತದ ಯಾವುದೇ ರಕ್ಷಣಾಸ್ಥಳಗಳಿಗೆ ಹಾನಿಮಾಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ನೌಕಾಪಡೆಯ ರೇರ್ ಅಡ್ಮಿರಲ್ ದಲ್ಬೀರ್ ಸಿಂಗ್ ಗುಜ್ರಾಲ್ ಅವರೂ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಸನ್ನದ್ಧ ಸ್ಥಿತಿಯಲ್ಲಿ ಸೇನೆ

ವಿಂಗ್ ಕಮಾಂಡರ್ ಬಿಡುಗಡೆಗೆ ಪಾಕಿಸ್ತಾನ ಭರವಸೆ ನೀಡಿದ್ದರೂ ಸೇನೆ ಹಾಗೂ ಭದ್ರತಾಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದುಮೇಜರ್ ಜನರಲ್ ಸುರೇಂದ್ರ ಸಿಂಗ್ ಮಹಲ್ ಹೇಳಿದ್ದಾರೆ.

ಗಡಿದಾಟಿ ಬಂದಿದ್ದ ಪಾಕಿಸ್ತಾನದ ಎಫ್–16 ಯುದ್ಧವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.‘ಪಾಕಿಸ್ತಾನದಿಂದ ಎದುರಾಗುವ ಯಾವುದೇ ಬೆದರಿಕೆಯನ್ನು ಎದುರಿಸಲು ಸೇನೆಯನ್ನು ಸನ್ನದ್ಧಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.

ಶೆಲ್ ದಾಳಿಯನ್ನು ಎದುರಿಸಲು ಕಾಶ್ಮೀರದಲ್ಲಿ ಪಾಕಿಸ್ತಾನದ ಜೊತೆ ಹೊಂದಿಕೊಂಡಿರುವ ಗಡಿಯುದ್ದಕ್ಕೂ ಶಸ್ತ್ರಾಸ್ತ್ರಗಳನ್ನು ಸಿದ್ಧವಾಗಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕ್ಷಿಪಣಿಯ ತುಣುಕು ಪ್ರದರ್ಶನ

ಭಾರತದ ವಾಯುಗಡಿ ದಾಟಿಬಂದಿದ್ದ ಪಾಕಿಸ್ತಾನದ ಎಫ್–16 ಯುದ್ಧವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದಿರುವ ಸೇನಾ ಅಧಿಕಾರಿಗಳು, ಈ ಸಂಬಂಧ ಕ್ಷಿಪಣಿಯ ತುಣುಕುಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಆದರೆ ಭಾರತದ ವಾದವನ್ನು ನಿರಾಕರಿಸುತ್ತಾ ಬಂದಿರುವ ಪಾಕಿಸ್ತಾನ, ತನ್ನ ಯಾವುದೇ ಯುದ್ಧವಿಮಾನವನ್ನು ಭಾರತ ಹೊಡೆದಿಲ್ಲ ಎಂದಿದೆ. ಜೆಟ್‌ನಿಂದ ಹೊರಜಿಗಿಯುವಲ್ಲಿ ಯಶಸ್ವಿಯಾದ ಅಭಿನಂದನ್ ಅವರನ್ನು ಗಡಿಯಾಚೆಗಿದ್ದ ಪಾಕಿಸ್ತಾನದ ಸೇನಾಸಿಬ್ಬಂದಿ ವಶಕ್ಕೆ ಪಡೆದಿದ್ದರು.

ಸುರಕ್ಷಿತ ಆಗಮನ: ತಂದೆಯ ವಿಶ್ವಾಸ

‘ಮಗನ ಧೈರ್ಯದ ಬಗ್ಗೆ ಹೆಮ್ಮೆ ಮೂಡಿದೆ. ನೆರೆಯ ದೇಶದ ವಶದಲ್ಲಿದ್ದರೂ, ನೈಜ ಯೋಧನ ರೀತಿ ಅವನು ಮಾತನಾಡಿದ್ದಾನೆ. ಸುರಕ್ಷಿತವಾಗಿ ವಾಪಸಾಗಲು ಪ್ರಾರ್ಥಿಸುತ್ತೇನೆ’ ಎಂದುಪಾಕಿಸ್ತಾನದ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಎಸ್.ವರ್ಧಮಾನ್ ಅವರು ಹೇಳಿದ್ದಾರೆ.

‘ಸ್ನೇಹಿತರೇ ನೀವು ತೋರಿದ ಕಾಳಜಿ ಹಾಗೂ ಹಾರೈಕೆಗಳಿಗೆ ಧನ್ಯವಾದ. ಅಭಿನಂದನ್‌ ಬದುಕಿದ್ದಾನೆ, ಅವನಿಗೆ ಗಾಯವಾಗಿಲ್ಲ, ಮನದಲ್ಲಿ ದೃಢವಾದ ಧೈರ್ಯವಿದೆ. ಅವನು ಮಾತನಾಡಿದ ರೀತಿಯೇ ಇದಕ್ಕೆ ನಿದರ್ಶನ’ ಎಂದು ವರ್ಧಮಾನ್ ಹೇಳಿದ್ದಾರೆ.

ಇಡೀ ದೇಶದ ಜನರು ತಮ್ಮ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ. ‘ನಿಮ್ಮ ಬೆಂಬಲ ಹಾಗೂ ಶಕ್ತಿಯಿಂದ ನಮ್ಮ ಸಾಮರ್ಥ್ಯ ವೃದ್ಧಿಸಿದೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.