ADVERTISEMENT

ಲೀಪಾ ಕಣಿವೆಯಲ್ಲಿರುವ ಪಾಕ್‌ ಸೇನಾ ನೆಲೆಗಳ ಧ್ವಂಸ

ಪಿಟಿಐ
Published 20 ಮೇ 2025, 16:02 IST
Last Updated 20 ಮೇ 2025, 16:02 IST
ಚಿನಾರ್‌ ಕೋರ್‌
ಚಿನಾರ್‌ ಕೋರ್‌   

ತಂಗದರ್‌ (ಜಮ್ಮು ಮತ್ತು ಕಾಶ್ಮೀರ): ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಲೀಪಾ ಕಣಿವೆಯಲ್ಲಿರುವ ಸೇನಾ ನೆಲೆಗಳನ್ನು ಭಾರತೀಯ ಸೇನೆಯು ಸಂಪೂರ್ಣವಾಗಿ ನಾಶ ಮಾಡಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗದರ್‌ನಲ್ಲಿನ ಎಲ್‌ಒಸಿ ಬಳಿ ಪಿಟಿಐ ಸುದ್ದಿ ಸಂಸ್ಥೆ ಪರಿಶೀಲನೆ ನಡೆಸಿದೆ. ಪಾಕಿಸ್ತಾನ ಸೇನಾ ನೆಲೆಗಳು ನಾಶವಾಗಿರುವುದು ಸತ್ಯ ಎಂದು ಪಿಟಿಐ ಹೇಳಿದೆ. ಭಾರತೀಯ ಸೇನೆಯ ಚಿನಾರ್‌ ಕೋರ್‌ ಪಡೆಯು ಪಾಕ್‌ ಸೇನಾ ನೆಲೆಗಳ ಮೇಲೆ ಮೇ ತಿಂಗಳ ಎರಡನೇ ವಾರ ‘ಆಪರೇಷನ್‌ ಸಿಂಧೂರ’ ವೇಳೆ ದಾಳಿ ನಡೆಸಿದೆ.

ಲೀಪಾ ಕಣಿವೆಯಲ್ಲಿ ಪಾಕಿಸ್ತಾನದ ಹಲವು ಸೇನಾ ನೆಲೆಗಳು ಇದ್ದವು. ಆದರೆ, ಅತಿ ಹೆಚ್ಚು ಹಾನಿ ಉಂಟು ಮಾಡುವ ಉದ್ದೇಶದಿಂದ ಹೆಚ್ಚು ಹಾನಿ ಉಂಟಾಗಬಲ್ಲ ನೆಲೆಗಳನ್ನೇ ಭಾರತೀಯ ಸೇನೆಯು ಆಯ್ದುಕೊಂಡು ನಿರ್ದಿಷ್ಟ ದಾಳಿ ನಡೆಸಿದೆ.

ADVERTISEMENT

‘ಪಾಕ್‌ನ ಮೂರು ಸೇನಾ ನೆಲೆಗಳನ್ನು ನಾವು ಸಂಪೂರ್ಣ ನಾಶ ಮಾಡಿದ್ದೇವೆ. ಜೊತೆಗೆ, ಶಸ್ತ್ರಾಸ್ತ್ರ ಸಂಗ್ರಹಾಗಾರ, ತೈಲ ಸಂಗ್ರಹ ಘಟಕ ಸೇರಿದಂತೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿ ನಾಶ ಮಾಡಿದ್ದೇವೆ. ನಮ್ಮ ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ತನ್ನ ನೆಲೆಗಳನ್ನು ಪುನಃ ಕಟ್ಟಿಕೊಳ್ಳಲು ಪಾಕಿಸ್ತಾನಕ್ಕೆ ಕನಿಷ್ಠ 8ರಿಂದ12 ತಿಂಗಳು ಬೇಕಾಗಬಹುದು’ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ನಾವೇ ಅಭಿವೃದ್ಧಿಪಡಿಸಿದ ಆಕಾಶದೀಪ ರೇಡಾರ್‌ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ. ನಮ್ಮ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆಯು ಪಾಕ್‌ನ ವಾಯು ದಾಳಿಯನ್ನು ಸದೃಢವಾಗಿ ಎದುರಿಸಿತು. ನಮ್ಮ ಯಾವುದೇ ಸೇನಾ ಸೌಕರ್ಯಗಳಿಗೆ ಹಾನಿಯಾಗಿಲ್ಲ. ಆದರೆ, ನಮ್ಮ ಶತ್ರುಗಳ ನೆಲೆಗಳು ನಾಶವಾದವು’ ಎಂದು ಮತ್ತೊಬ್ಬ ಅಧಿಕಾರಿ ವಿವರಿಸಿದರು.

‘ಮೊದಲು ಜೀವ ಉಳಿಸಿಕೊಳ್ಳಿ ಎಂದಿದ್ದರು’
‘ನಮ್ಮ ದಾಳಿಯು ಎಷ್ಟು ತೀವ್ರವಾಗಿತ್ತೆಂದರೆ ಪಾಕಿಸ್ತಾನ ಸೇನಾ ಪಡೆಗಳು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಮುಂದಾದರು. ಆಸ್ತಿ ಹಾನಿಯ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ‘ಮೊದಲು ನಿಮ್ಮ ಜೀವ ಉಳಿಸಿಕೊಳ್ಳಿ’ ಎಂದು ಪಾಕಿಸ್ತಾನ ಸೇನಾ ಕಮಾಂಡರ್‌ ಹೇಳಿದ್ದರು’ ಎಂದು ಚಿನಾರ್‌ ಕೋರ್‌ನ ಅಧಿಕಾರಿಗಳು ಮಾಹಿತಿ ನೀಡಿದರು. ಮೇ 7ರಂದು ಮುಜಾಫರಾಬಾದ್‌ ಮೇಲೆ 25 ನಿಮಿಷಗಳವರೆಗೆ ನಡೆಸಿದ ‘ಆಪರೇಷನ್‌ ಸಿಂಧೂರ’ದ ಕುರಿತು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.