ನವದೆಹಲಿ: ಗಣಿಗಾರಿಕೆ ಹಾಗೂ ಖನಿಜಗಳಿರುವ ಜಮೀನುಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಗಳು ಶಾಸನಬದ್ಧ ಅಧಿಕಾರ ಹೊಂದಿವೆ ಎಂಬ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ನೀಡಿದ್ದ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಪರಿಹಾರಾತ್ಮಕ ಅರ್ಜಿ ಸಲ್ಲಿಸಿದೆ.
‘9 ಸದಸ್ಯರು ಇದ್ದ ನ್ಯಾಯಪೀಠವು 8:1ರ ಅನುಪಾತದಲ್ಲಿ ಬಹುಮತ ತೀರ್ಪು ನೀಡಿದೆ. ತೆರಿಗೆ ವಿಧಿಸುವ ವಿಚಾರ ಗಂಭೀರವಾಗಿರುವ ಕಾರಣ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತಿದೆ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ವಿಕ್ರಮ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರು ಇರುವ ಪೀಠಕ್ಕೆ ತಿಳಿಸಿದ್ದಾರೆ.
ಗಣಿಗಾರಿಕೆ ಹಾಗೂ ಖನಿಜಗಳಿರುವ ಜಮೀನುಗಳ ಮೇಲೆ ತೆರಿಗೆ ವಿಧಿ0ಸುವುದಕ್ಕೆ ಸಂಬಂಧಿಸಿ, ಆಗ ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ವೈ.ಚಂದ್ರಚೂಡ್ ನೇತೃತ್ವದ 9 ಸದಸ್ಯರಿದ್ದ ಸಾಂವಿಧಾನಿಕ ಪೀಠವು, ಕಳೆದ ವರ್ಷ ಜುಲೈ 25ರಂದು 8:1ರ ಬಹುಮತದ ತೀರ್ಪು ನೀಡಿತ್ತು.
ಖನಿಜಗಳಿರುವ ಜಮೀನುಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅಧಿಕಾರ ಇದೆ. ತೆರಿಗೆ ಮತ್ತು ರಾಯಧನ ಬೇರೆಬೇರೆ ಎಂದೂ ಪೀಠ ಸ್ಪಷ್ಟಪಡಿಸಿತ್ತು.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಿನ್ನ ನಿಲುವು ವ್ಯಕ್ತಪಡಿಸಿದ್ದರು. ರಾಯಧನ ಕೂಡ ತೆರಿಗೆಯ ಒಂದು ರೂಪವೇ ಆಗಿದ್ದು, ಇಂತಹ ತೆರಿಗೆ ಆಕರಣೆ ಮಾಡುವುದಕ್ಕೆ ಕೇಂದ್ರಕ್ಕೆ ಅಧಿಕಾರ ಇದೆ ಎಂದು ಭಿನ್ನ ತೀರ್ಪು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.