ADVERTISEMENT

9 ವರ್ಷಗಳಲ್ಲಿ ಬದಲಾದ ಶಾ ವ್ಯಕ್ತಿಚಿತ್ರ

ರಾಜ್ಯ ಗೃಹ ಸಚಿವರಾಗಿ ನಿರ್ಗಮಿಸಿ, ಕೇಂದ್ರ ಗೃಹ ಸಚಿವರಾಗಿ ಮರಳಿದರು

​ಪ್ರಜಾವಾಣಿ ವಾರ್ತೆ
Published 31 ಮೇ 2019, 19:45 IST
Last Updated 31 ಮೇ 2019, 19:45 IST
ಅಮಿತ್‌ ಶಾ
ಅಮಿತ್‌ ಶಾ   

ಅಹಮದಾಬಾದ್‌:ಬಿಜೆಪಿಯ ಪ್ರಗತಿಗಾಗಿ ಅವಿಶ್ರಾಂತ ದುಡಿದ ಅಮಿತ್‌ ಶಾ ಈಗ ದೇಶದ ಗೃಹ ಸಚಿವ. ಒಂಬತ್ತು ವರ್ಷಗಳ ಹಿಂದೆ ಗುಜರಾತ್‌ನ ಗೃಹಸಚಿವರಾಗಿದ್ದಾಗಲೇ ಸಿಬಿಐ ಅಧಿಕಾರಿಗಳು ಇವರನ್ನು ಬಂಧಿಸಿದ್ದರು. ಆಗ ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದವರು ಈಗಿನ ಪ್ರಧಾನಿ ನರೇಂದ್ರ ಮೋದಿ.

‘ರಾಜ್ಯ ಗೃಹ ಸಚಿವ ಸ್ಥಾನದಿಂದ ಒಂಬತ್ತು ವರ್ಷಗಳ ಹಿಂದೆ ಕೆಳಗಿಳಿದಿದ್ದ ಅಮಿತ್‌ ಶಾ, ಈಗ ಕೇಂದ್ರದ ಗೃಹ ಸಚಿವರಾಗಿ ಭವ್ಯವಾಗಿ ತಮ್ಮ ತವರು ಗುಜರಾತ್‌ಗೆ ಬರುತ್ತಿದ್ದಾರೆ. ಅಮಿತ್‌ ಶಾ ಬದುಕಿನಲ್ಲಿ ಇದು ದೊಡ್ಡ ಸಾಧನೆ’ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಜುಲೈ 2010ರಲ್ಲಿ ಅವರು ಬಂಧಿತರಾದಾಗ ಶಾ ಅವರ ರಾಜಕೀಯ ಜೀವನ ಮುಗಿದೇಹೋಯಿತು ಎಂದು ಹಲವರು ಭಾವಿಸಿದ್ದರು.

ADVERTISEMENT

ಚುನಾವಣೆಯಲ್ಲಿ ಸತತವಾಗಿ ಗೆಲ್ಲುವ ಕಾರ್ಯತಂತ್ರ ರೂಪಿಸಿದ್ದ ಶಾ ಅವರನ್ನು ಬಿಜೆಪಿಯ ‘ಚುನಾವಣಾ ಚಾಣಕ್ಯ’ ಎಂದೇ ಹೇಳಲಾಗುತ್ತದೆ. 54 ವರ್ಷ ವಯಸ್ಸಿನ ಶಾ, ಈಗ ಕೇಂದ್ರ ಸಂಪುಟದಲ್ಲಿ ಪ್ರಧಾನಿ ನಂತರದ ಪ್ರಭಾವಿ ನಾಯಕ. ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗಲೂ ಅವರು ಸಂಪುಟದಲ್ಲಿ ಶಾ ಪ್ರಭಾವಿ ಸಚಿವರಾಗಿದ್ದರು.

ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಶಾ ಬಂಧನ ಮತ್ತು ಆನಂತರ ಗುಜರಾತ್‌ನಿಂದ ಅವರ ನಿರ್ಗಮನದವರೆಗೂ ಸುಮಾರು ಒಂದು ದಶಕದ ಕಾಲ ಈ ಇಬ್ಬರೂ ಜೊತೆಯಾಗಿ ಗುಜರಾತ್‌ನಲ್ಲಿ ಸರ್ಕಾರ ಮುನ್ನಡೆಸಿದ್ದರು.

ಶಾ ಹುಟ್ಟೂರು ಗಾಂಧಿನಗರ ಜಿಲ್ಲೆಯ ಮಾನ್ಸಾ. ಎಲ್‌.ಕೆ. ಅಡ್ವಾಣಿ ಅವರು 1990ರಲ್ಲಿ ಸೋಮನಾಥ ದೇವಸ್ಥಾನದಿಂದ ಅಯೋಧ್ಯೆವರೆಗೆ ನಡೆಸಿದ ರಥಯಾತ್ರೆಯಲ್ಲಿ ಈ ಇಬ್ಬರು ಪ್ರಮುಖ ಪಾತ್ರ ವಹಿಸಿದ್ದರು.

‘ಅವರಿಗೆ ಎಲ್ಲಾ ಬೆಳವಣಿಗೆಗಳ ಅರಿವಿದೆ. ಕಾರ್ಯಕ್ರಮಗಳಿಗೆ ಹೋಗುವುದಕ್ಕೂ ಮುನ್ನ ಅಗತ್ಯ ಸಿದ್ಧತೆ ಮಾಡಿಕೊಂಡೇ ಹೋಗುತ್ತಾರೆ. ಸಾಕಷ್ಟು ಓದುತ್ತಾರೆ. ಗುಜರಾತ್‌ ಸಾಹಿತ್ಯದ ಬಗ್ಗೆ ಹೆಚ್ಚಿನ ಅರಿವಿದೆ. ಗೌರಿಶಂಕರ ಜೋಷಿ ಅಲಿಯಾಸ್ ಧೂಮಕೇತು ಅವರ ನೆಚ್ಚಿನ ಲೇಖಕ’ ಎಂದು ಶಾ ಜೊತೆಗೆ 15 ವರ್ಷ ಕೆಲಸ ಮಾಡಿರುವ ಆಪ್ತರೊಬ್ಬರು ಸ್ಮರಿಸುತ್ತಾರೆ.

‘ಶಾ ಹಾಗೂ ಮೋದಿ ಅವರ ಕಾರ್ಯಶೈಲಿ ಹೆಚ್ಚು ಕಡಿಮೆ ಒಂದೇ ರೀತಿಯದ್ದಾಗಿದೆ. ಇಬ್ಬರೂ ಪ್ರಮುಖ ಆಗುಹೋಗುಗಳ ಬಗ್ಗೆ ನಿಯಮಿತವಾಗಿ ಮಾಹಿತಿಯನ್ನು ನೀಡುವ ತಮ್ಮದೇ ಆದ ಸಂಪರ್ಕ ಜಾಲವನ್ನು ಹೊಂದಿದ್ದಾರೆ. ಆಪ್ತರಿಂದ ನಿಯಮಿತವಾಗಿ ಮಾಹಿತಿ ಪಡೆಯುತ್ತಾರೆ’ ಎಂದು ಪಕ್ಷದ ನಾಯಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.