ಲಂಡನ್: ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ವಿಚಾರವಾಗಿ ಬ್ರಿಟನ್ನಿನ ವಾಣಿಜ್ಯ ಮತ್ತು ವ್ಯಾಪಾರ ಸಚಿವ ಜೊನಾಥನ್ ರೆನಾಲ್ಡ್ಸ್ ಜೊತೆ ಉತ್ತಮ ಮಾತುಕತೆ ನಡೆಯಿತು ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಗೋಯಲ್ ಅವರು ಸೋಮವಾರ ಬೆಳಿಗ್ಗೆ ಲಂಡನ್‌ಗೆ ಬಂದಿದ್ದಾರೆ. ಗೋಯಲ್ ಅವರ ಜೊತೆ ಭಾರತದ ಕೆಲವು ಪ್ರಮುಖ ಕಂಪನಿಗಳ ಪ್ರತಿನಿಧಿಗಳೂ ಇದ್ದಾರೆ. ಬ್ರಿಟನ್ ಜೊತೆಗಿನ ವ್ಯಾಪಾರ ಹಾಗೂ ಹೂಡಿಕೆ ಸಂಬಂಧವನ್ನು ಉತ್ತಮಪಡಿಸುವ ಉದ್ದೇಶವನ್ನು ಅವರ ಎರಡು ದಿನಗಳ ಭೇಟಿಯು ಹೊಂದಿದೆ.
‘ಬ್ರಿಟನ್ನಿನ ಉದ್ದಿಮೆಗಳಿಗೆ ಭಾರತದ ಮಾರುಕಟ್ಟೆಯ ಲಭ್ಯತೆಯನ್ನು ಸುಧಾರಿಸುವ, ತೆರಿಗೆ ಪ್ರಮಾಣ ಕಡಿಮೆ ಮಾಡುವ ಮತ್ತು ವ್ಯಾಪಾರ ವಹಿವಾಟು ನಡೆಸುವ ಪ್ರಕ್ರಿಯೆಯನ್ನು ಸುಲಭವೂ ಕಡಿಮೆ ವೆಚ್ಚದ್ದೂ ಆಗಿಸಲು ಅಗತ್ಯವಿರುವ ಒಪ್ಪಂದ ಮಾಡಿಕೊಳ್ಳಲು ಸರ್ಕಾರ ಬದ್ಧವಾಗಿದೆ’ ಎಂದು ಬ್ರಿಟನ್ನಿನ ವಾಣಿಜ್ಯ ಮತ್ತು ವ್ಯಾಪಾರ ಇಲಾಖೆಯ ವಕ್ತಾರರು ಹೇಳಿದ್ದಾರೆ.
ಎರಡೂ ದೇಶಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗಿದ್ದ ಕಾರಣಕ್ಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳಿಗೆ ವಿರಾಮ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.