ADVERTISEMENT

ಮಹಾರಾಷ್ಟ್ರದಲ್ಲಿ ಕಬ್ಬಿನ ಕೂಲಿಗಾಗಿ ಗರ್ಭಕೋಶ ತೆಗೆಸುತ್ತಿರುವ ಮಹಿಳೆಯರು: ರಾವುತ್

ಉದ್ಧವ್ ಠಾಕ್ರೆಗೆ ಪತ್ರ ಬರೆದ ಸಚಿವ ನಿತಿನ್ ರಾವುತ್

ಪಿಟಿಐ
Published 25 ಡಿಸೆಂಬರ್ 2019, 12:10 IST
Last Updated 25 ಡಿಸೆಂಬರ್ 2019, 12:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮುಟ್ಟಿನ ದಿನಗಳಲ್ಲಿ ವೇತನ ಕೈತಪ್ಪಿ ಹೋಗುವ ಕಾರಣಕ್ಕಾಗಿ ಶಸ್ತ್ರಚಿಕಿತ್ಸೆ ಮೂಲಕ ಗರ್ಭಕೋಶ ತೆಗೆಸಿಕೊಳ್ಳುತ್ತಿರುವ ಕುರಿತು ಸಚಿವ ನಿತಿನ್ ರಾವುತ್, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ.

ಒಂದು ವೇಳೆ ಕಬ್ಬಿನ ಗದ್ದೆಗಳ ಮಾಲೀಕರು ಮುಟ್ಟಿನ ದಿನಗಳಲ್ಲೂ ಈ ಮಹಿಳೆಯರಿಗೆ ವೇತನ ಕೊಡುವಂತಿದ್ದರೆ ಗರ್ಭಕೋಶ ತೆಗೆಸಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕೆಂದು ನಿತಿನ್ ಪತ್ರದಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.

‘ಮರಾಠವಾಡ ಪ್ರದೇಶದಲ್ಲಿರುವ ಕಬ್ಬಿನ ಗದ್ದೆಗಳಲ್ಲಿ ಬಹುಸಂಖ್ಯೆಯಲ್ಲಿ ಮಹಿಳೆಯರು ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.ಸುಮಾರು ಆರು ತಿಂಗಳ ಕಾಲ ಈ ಗದ್ದೆಗಳಲ್ಲಿ ಮಹಿಳೆಯರು ಕೂಲಿ ಕೆಲಸ ಮಾಡುತ್ತಾರೆ. ಅವರ ಮಾಸಿಕ ಋತುಸ್ರಾವದ ದಿನಗಳಲ್ಲಿಮಹಿಳೆಯರು ಕೂಲಿಕೆಲಸಕ್ಕೆ ಗೈರು ಹಾಜರಾಗುತ್ತಾರೆ. ಈ ಕಾರಣಕ್ಕಾಗಿ ಮಾಲೀಕರು ಗೈರು ಹಾಜರಾದ ದಿನಗಳ ಕೂಲಿಯನ್ನುಪಾವತಿಸುವುದಿಲ್ಲ. ಹೀಗಾಗಿ ಮುಟ್ಟಿನ ದಿನಗಳಲ್ಲಿ ಕೂಲಿ ತಪ್ಪಬಾರದು ಎನ್ನುವ ಕಾರಣಕ್ಕಾಗಿ ಸುಮಾರು 30 ಸಾವಿರಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಶಸ್ತ್ರಚಿಕಿತ್ಸೆಯ ಮೂಲಕ ತಮ್ಮ ಗರ್ಭಕೋಶಗಳನ್ನು ತೆಗೆಸಿಕೊಂಡಿದ್ದಾರೆ’ ಎಂದು ನಿತಿನ್ ಪತ್ರದಲ್ಲಿ ವಿವರವಾಗಿ ಮಾಹಿತಿ ನೀಡಿದ್ದಾರೆ.

ADVERTISEMENT

ಮರಾಠವಾಡದಲ್ಲಿ ಮಹಿಳಾ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಮಾನವೀಯ ನೆಲೆಯಲ್ಲಿ ಪರಿಹರಿಸಲು ಸಂಬಂಧಪಟ್ಟ ಇಲಾಖೆಗೆ ಸರ್ಕಾರ ಆದೇಶಿಸಬೇಕೆಂದು ನಿತಿನ್ ಕೋರಿದ್ದಾರೆ.

ಕಾಂಗ್ರೆಸ್‌ ಪಕ್ಷದ ನಿತಿನ್ ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಬುಡಕಟ್ಟು ಕಲ್ಯಾಣ, ಪರಿಹಾರ ಮತ್ತು ಪುನರ್ವಸತಿ ಹಾಗೂ ಜವಳಿ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.