ADVERTISEMENT

ಹೈದರಾಬಾದ್‌ | ಬುದ್ಧಿ ಹೇಳಿದ್ದಕ್ಕೆ ತಾಯಿಯ ಕೊಲೆ: ಪುತ್ರಿ, ಪ್ರಿಯಕರನ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 15:45 IST
Last Updated 25 ಜೂನ್ 2025, 15:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ಯುವಕನೊಂದಿಗೆ ಸಂಬಂಧ ಮುಂದುವರಿಸದಂತೆ ಬುದ್ಧಿಮಾತು ಹೇಳಿದ್ದ ತಾಯಿಯನ್ನೇ ಕೊಲೆ ಮಾಡಿದ ಆರೋಪದಡಿ ಮೃತ ಮಹಿಳೆಯ ಮಗಳು ಮತ್ಕು ತಯ ಪ್ರಿಯಕರನನ್ನು ತೆಲಂಗಾಣದ ಬಾಲನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಜೀಡಿಮೆಟ್ಲಾದಲ್ಲಿ 39 ವರ್ಷದ ಅಂಜಲಿ ಎಂಬುವರ ಕೊಲೆ ನಡೆದಿತ್ತು. ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ, 16 ವರ್ಷದ ಪುತ್ರಿಯೇ 19 ವರ್ಷದ ಶಿವ ಮತ್ತು ಆತನ ಸಹೋದರನ ಜತೆ ಸೇರಿ ಕೊಲೆ ಮಾಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

10ನೇ ತರಗತಿ ಓದುತ್ತಿದ್ದ ಬಾಲಕಿಗೆ ಎಂಟು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ನಲ್ಗೊಂಡದ ಶಿವ ಎಂಬಾತನ ಪರಿಚಯವಾಗಿ ಪ್ರೇಮಕ್ಕೆ ತಿರುಗಿದೆ. ಮಗಳಿಗೆ ಹೊಡೆದು ತಾಯಿ ಬುದ್ದಿವಾದ ಹೇಳಿದ್ದಾರೆ. ಆಗ ಮನೆ ತೊರೆದಿದ್ದ ಮಗಳು, ಶಿವನೊಂದಿಗೆ ತೆರಳಿದ್ದಳು.

ADVERTISEMENT

ತನ್ನ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕೊಲೆಯಾಗುವ ನಾಲ್ಕು ದಿನ ಮುನ್ನ ಅಂಜಲಿ ಪೊಲೀಸರಿಗೆ ದೂರು ನೀಡಿದ್ದರು. ನಲ್ಗೊಂಡದಲ್ಲಿ ಇಬ್ಬರನ್ನೂ ಪತ್ತೆ ಮಾಡಿದ್ದ ಪೊಲೀಸರು ಶಿವನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿ ಬಿಟ್ಟು ಕಳಿಸಿದ್ದರು.

‘ಮಂಗಳವಾರ ಶಿವ ಮತ್ತು ಆತನ ಸಹೋದರ ಬಾಲಕಿಯ ಮನೆಗೆ ಬಂದಿದ್ದಾರೆ. ಮನೆಯಲ್ಲಿದ್ದ ಅಂಜಲಿಯನ್ನು ತಳ್ಳಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಈ ವೇಳೆ ಬಾಲಕಿ ಮನೆಯ ಹೊರಗಡೆ ಇದ್ದಳು. ಆನಂತರ ತನಗೇನೂ ಗೊತ್ತಿಲ್ಲದಂತೆ ಕೋಣೆಯೊಂದರಲ್ಲಿ ಮಲಗಿಕೊಂಡಿದ್ದಳು’ ಎಂದು ಎಸಿಪಿ ನರೇಶ್ ರೆಡ್ಡಿ ತಿಳಿಸಿದ್ದಾರೆ.

ರಾತ್ರಿ 10 ಗಂಟೆಗೆ ಮನೆಗೆ ಬಂದ ಅಂಜಲಿ ಅವರ ಕಿರಿಯ ಪುತ್ರಿ ತಾಯಿ ನೆಲದ ಮೇಲೆ ಬಿದ್ದಿರುವುದನ್ನು ಕಂಡು ಅಕ್ಕಪಕ್ಕದವರನ್ನು ಸಹಾಯಕ್ಕೆ ಕರೆದಿದ್ದಾಳೆ. ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ದೊಡ್ಡ ಮಗಳು ಮನೆಯ ಹೊರಗೆ ನಿಂತಿರುವುದು, ಇಬ್ಬರು ಯುವಕರು ಮನೆ ಒಳಗೆ ಹೋಗಿ ಹೊರಬರುವ ದೃಶ್ಯ ಪತ್ತೆಯಾಗಿತ್ತು. ಮೂವರನ್ನೂ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಯಕಿಯಾಗಿದ್ದ ಅಂಜಲಿ ಶಾಪುರ ನಗರದಲ್ಲಿ ಇಬ್ಬರು ಹೆಣ್ಣು ಮಕ್ಕಳ ಜೊತೆ ವಾಸವಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.