ಲಖನೌ: ಬೇರೆ ಸಮುದಾಯದ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಅಣ್ಣನೊಬ್ಬ ತನ್ನ 16 ವರ್ಷ ವಯಸ್ಸಿನ ತಂಗಿಯನ್ನು ನಡು ರಸ್ತೆಯಲ್ಲಿಯೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ಬಾಲಕಿ ಬೇರೊಂದು ಸಮುದಾಯದ ಯುವಕನೊಂದಿಗೆ ಸಂಬಂಧದಲ್ಲಿದ್ದಳು ಮತ್ತು ಆತನನ್ನೇ ವಿವಾಹವಾಗುವುದಾಗಿ ತನ್ನ ಕುಟುಂಬಕ್ಕೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ಸಹೋದರ ಹಸೀನ್ ಎಂಬಾತ ತಂಗಿಯ ಹತ್ಯೆ ಮಾಡಿದ್ದಾನೆ. ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯು ಈ ಹಿಂದೆ ತನ್ನ ಪ್ರೇಮಿಯೊಂದಿಗೆ ಪರಾರಿಯಾಗಿದ್ದಳು. ಬಳಿಕ ಆಕೆಯನ್ನು ಪ್ರಿಯಕರ ಅಪಹರಿಸಿದ್ದಾನೆ ಎಂದು ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. ಹಲವು ತಿಂಗಳುಗಳ ಬಳಿಕ ಪೊಲೀಸರು ಬಾಲಕಿಯನ್ನು ಕರೆತಂದಿದ್ದರು.
ಬುಧವಾರ ಮುಂಜಾನೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಣ್ಣ ತಂಗಿಯ ಮಧ್ಯೆ ಜಗಳ ಶುರುವಾಗಿದ್ದು, ಆಗ ಹಸೀನ್ ತಂಗಿಗೆ ಥಳಿಸಿದ್ದಾನೆ. ಅಣ್ಣನಿಂದ ಬಚಾವಾಗಲು ಇಂಚಾಉಳಿಯ ನಗರದ ರಸ್ತೆಗೆ ಬಾಲಕಿ ಓಡಿ ಬಂದಿದ್ದಾಳೆ. ಆಕೆಯನ್ನು ಬೆನ್ನಟ್ಟಿ ಬಂದ ಹಸೀನ್, ತೀವ್ರವಾಗಿ ಥಳಿಸಿ ಬಳಿಕ ರಸ್ತೆಯಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ಮೂಕ ಪ್ರೇಕ್ಷಕರಂತೆ ನಿಂತಿದ್ದರು.
ತಂಗಿಯು ಕೊನೆಯುಸಿರು ಚೆಲ್ಲಿದ ಬಳಿಕ ಹಸೀನ್, ಆಕೆಯ ಮೃತದೇಹವನ್ನು ರಸ್ತೆಯಲ್ಲಿಯೇ ಬಿಟ್ಟು ಮನೆಗೆ ತೆರಳಿದ್ದಾನೆ. ಇದೊಂದು ಮರ್ಯಾದೆಗೇಡು ಹತ್ಯೆ ಪ್ರಕರಣ ಎಂದು ಶಂಕಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.