ಮುಂಬೈ: ಮೀಠಿ ನದಿ ಹೂಳು ತೆಗೆಯುವಲ್ಲಿ ನಡೆದಿದೆ ಎನ್ನಲಾದ ಹಗರಣದ ಜತೆಗೆ ಸಂಪರ್ಕ ಹೊಂದಿರುವ ಹಣ ಲೇವಾದೇವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬಾಲಿವುಡ್ ನಟ ದಿನೊ ಮೊರಿಯಾ ಅವರಿಗೆ ಸೇರಿದ ಮುಂಬೈನ ಕಟ್ಟಡ ಮತ್ತು ಕೇರಳದ ಕೊಚ್ಚಿಯ ಹಲವೆಡೆ ಶುಕ್ರವಾರ ದಾಳಿ ನಡೆಸಿದೆ.
ಮುಂಬೈನಲ್ಲಿ ದಿನೊ ಮೊರಿಯಾ ಮತ್ತು ಅವರ ಸಹೋದರನಿಗೆ ಸೇರಿದ ಕಟ್ಟಡ, ಕೆಲವು ಗುತ್ತಿಗೆದಾರರ ಮನೆಗಳು ಸೇರಿ ಒಟ್ಟು 15ಕ್ಕೂ ಹೆಚ್ಚು ಕಡೆಗಳಲ್ಲಿ ಇ.ಡಿ ದಾಳಿ ನಡೆದಿದೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೀಠಿ ನದಿ ಹೂಳು ತೆಗೆಯುವ ಹಗರಣದಿಂದ ಬೃಹತ್ ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ₹65 ಕೋಟಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹಗರಣದಲ್ಲಿ ಭಾಗಿಯಾಗಿರುವ ಬಿಎಂಸಿಯ ಕೆಲವು ಅಧಿಕಾರಿಗಳ ವಿರುದ್ಧವೂ ಇ.ಡಿ ಪ್ರಕರಣ ದಾಖಲಿಸಿದೆ.
ಇದೇ ಆರೋಪಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕದಲ್ಲೂ (ಇಒಡಬ್ಲ್ಯೂ) 13 ಜನರ ವಿರುದ್ಧ ದೂರು ದಾಖಲಾಗಿದೆ. ಇದರಲ್ಲಿ ಉನ್ನತ ಅಧಿಕಾರಿಗಳು, ಗುತ್ತಿಗೆದಾರರೂ ಸೇರಿದ್ದಾರೆ. ಇಒಡಬ್ಲ್ಯೂ ಇತ್ತೀಚೆಗೆ ದಿನೊ ಮೊರಿಯಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.