ADVERTISEMENT

ಮಿಜೋರಾಂ ಚುನಾವಣಾ ಅಧಿಕಾರಿಗೆ ಸಮನ್ಸ್

ಪಿಟಿಐ
Published 7 ನವೆಂಬರ್ 2018, 19:46 IST
Last Updated 7 ನವೆಂಬರ್ 2018, 19:46 IST

ಐಜ್ವಾಲ್: ತ್ರಿಪುರಾದಲ್ಲಿ ನೆಲೆಸಿರುವ ಬ್ರೂ ಬುಡಕಟ್ಟು ಜನರನ್ನು ಮತದಾರರ ಪಟ್ಟಿಗೆ ಸೇರಿಸಲು ಆದೇಶ ಹೊರಡಿಸಿಮಿಜೋ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಮಿಜೋರಾಂ ಮುಖ್ಯ ಚುನಾವಣಾ ಅಧಿಕಾರಿ ಎಸ್‌.ಬಿ.ಶಶಾಂಕ್ ಅವರಿಗೆ ಚುನಾವಣಾ ಆಯೋಗವು ಸಮನ್ಸ್ ನೀಡಿದೆ. ಆಯೋಗದ ಉನ್ನತ ಸಮಿತಿ ಎದುರು ಹಾಜರಾಗಲು ಅವರು ದೆಹಲಿಗೆ ತೆರಳಿದ್ದಾರೆ.

ರಾಜ್ಯದ ಚುನಾವಣಾ ಅಧಿಕಾರಿ ಹುದ್ದೆಯಿಂದ ಅವರನ್ನು ವಜಾ ಮಾಡಬೇಕು ಮತ್ತು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿನಡೆಸುತ್ತಿದ್ದಪ್ರತಿಭಟನೆಯನ್ನು ಮಿಜೋರಾಂ ಸ್ವಯಂಸೇವಾ ಸಂಸ್ಥೆಗಳ ಸಹಯೋಗ ಸಮಿತಿಯು ನಿಲ್ಲಿಸಿದೆ.

1997ರ ಸಂಘರ್ಷದಲ್ಲಿ ಮಿಜೋರಾಂ ತೊರೆದು ತ್ರಿಪುರಾದಲ್ಲಿ ಆಶ್ರಯ ಪಡೆದಿರುವ ಬ್ರೂ ಬುಡಕಟ್ಟು ಜನರನ್ನು ರಾಜ್ಯದ ಮತದಾರರ ಪಟ್ಟಿಗೆ ಸೇರಿಸಬೇಕು ಎಂದು ರಾಜ್ಯದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಶಶಾಂಕ್ ವಿರುದ್ಧ ಮಿಜೋ ಸಮುದಾಯದ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು.

ADVERTISEMENT

ತ್ರಿಪುರಾದಲ್ಲಿ ಆಶ್ರಯ ಪಡೆದ ಎಲ್ಲಾ ಬ್ರೂ ಜನರಿಗೂ ಮತದಾನದ ಹಕ್ಕು ನೀಡಬೇಕು ಎಂದು ಆಯೋಗವು ಹೇಳಿತ್ತು. ಪುನರ್ವಸತಿ ಕೇಂದ್ರಗಳಲ್ಲೇ ಮತಗಟ್ಟೆಗಳನ್ನು ತೆರೆಯಲು ಮುಂದಾಗಿತ್ತು. ಇದಕ್ಕೆಮಿಜೋರಾಂ ಸ್ವಯಂಸೇವಾ ಸಂಸ್ಥೆಗಳ ಸಹಯೋಗ ಸಮಿತಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಬ್ರೂ ಜನರು ಮಿಜೋರಾಂನಲ್ಲಿನ ತಮ್ಮ ಸ್ವಗ್ರಾಮಗಳಿಗೆ ಹಿಂತಿರುಗಿ ಅಲ್ಲಿಯೇ ಮತ ಚಲಾಯಿಸಬೇಕು ಎಂದು ಸಮಿತಿಯು ಒತ್ತಾಯಿಸಿತ್ತು.

ಶಶಾಂಕ್ ಅವರ ಆದೇಶಕ್ಕೆ ಸ್ಪಂದಿಸಲಿಲ್ಲ ಎಂಬ ಆರೋಪದಲ್ಲಿ ಪ್ರಧಾನ ಕಾರ್ಯದರ್ಶಿಯನ್ನು ಚುನಾವಣಾ ಆಯೋಗವು ವಜಾ ಮಾಡಿತ್ತು. ಈ ಸಂಬಂಧ ರಾಜ್ಯ ಸರ್ಕಾರವು ಪ್ರಧಾನಿಗೆ ಪತ್ರ ಬರೆದಿತ್ತು. ‘ಶಶಾಂಕ್ ಅವರು ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಅವರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಿ’ ಎಂದು ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿತ್ತು.

ನಾಮಪತ್ರ ಸಲ್ಲಿಸಲಾಗದ ಮುಖ್ಯಮಂತ್ರಿ: ಚುನಾವಣಾ ಕಚೇರಿಯ ಎದುರು ತೀವ್ರ ಪ್ರತಿಭಟನೆ ನಡೆಯುತ್ತಿದ್ದ ಕಾರಣ ಮುಖ್ಯಮಂತ್ರಿ ಲಾಲ್ ತನ್ಹಾವ್ಲಾ ಅವರು ನಾಮಪತ್ರ ಸಲ್ಲಿಸುವಲ್ಲಿ ವಿಫಲವಾಗಿದ್ದಾರೆ. ರಾಜ್ಯದಲ್ಲಿ ಇದೇ 28ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 9 ಕೊನೆಯ ದಿನಾಂಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.