ADVERTISEMENT

ಮಿಜೋರಾಂ: ಎಂಎನ್‌ಎಫ್‌ಗೆ ಅಧಿಕಾರ

ಮೂರನೇ ಬಾರಿ ಅಧಿಕಾರ ಹಿಡಿಯುವ ಕಾಂಗ್ರೆಸ್‌ ಆಸೆಗೆ ತಣ್ಣೀರು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 20:15 IST
Last Updated 11 ಡಿಸೆಂಬರ್ 2018, 20:15 IST
   

ಗುವಾಹಟಿ:ಹತ್ತು ವರ್ಷಗಳ ಬಳಿಕ ಮಿಜೊ ನ್ಯಾಷನಲ್‌ ಫ್ರಂಟ್‌ (ಎಂಎನ್‌ಎಫ್‌) ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಅದ್ಭುತ ಜಯ ಗಳಿಸಿದೆ. 40 ಸದಸ್ಯ ಬಲದ ವಿಧಾನಸಭೆಯಲ್ಲಿ 26 ಸ್ಥಾನಗಳನ್ನು ಪಡೆದಿದೆ. ಎಂಎನ್‌ಎಫ್‌ 20 ವರ್ಷಗಳ ಹಿಂದೆ 21 ಸ್ಥಾನ ಪಡೆದಿತ್ತು.

2008ರಲ್ಲಿ ಎಂಎನ್‌ಎಫ್‌ದಿಂದ ಅಧಿಕಾರ ಕಿತ್ತುಕೊಂಡಿದ್ದ ಕಾಂಗ್ರೆಸ್‌ ಕೇವಲ ಐದು ಸ್ಥಾನ ಪಡೆದಿದೆ. ಮೂರನೇ ಬಾರಿ ಅಧಿಕಾರ ಹಿಡಿಯಬೇಕು ಎಂಬ ಕಾಂಗ್ರೆಸ್‌ ಆಸೆ ಈಡೇರಲಿಲ್ಲ. ಇದರಿಂದಾಗಿ ಈಶಾನ್ಯ ಭಾರತದಲ್ಲಿ ಕಾಂಗ್ರೆಸ್‌ ಸಂಪೂರ್ಣವಾಗಿ ನೆಲೆ ಕಳೆದುಕೊಂಡಂತಾಗಿದೆ. 7 ಸಣ್ಣ ಪಕ್ಷಗಳ ಒಕ್ಕೂಟಝೋರಾಮ್‌ ಪೀಪಲ್ಸ್‌ ಮೂವ್‌ಮೆಂಟ್‌ (ಜೆಪಿಎಂ) ಎಂಟು ಕ್ಷೇತ್ರಗಳಲ್ಲಿ ಜಯ ದಾಖಲಿಸಿದೆ.

39 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ,ಕ್ರೈಸ್ತ ಸಮುದಾಯದವರು ಹೆಚ್ಚಿರುವ ಈ ರಾಜ್ಯದಲ್ಲಿ ತನ್ನ ಖಾತೆ ತೆರೆದಿದೆ. ಕಾಂಗ್ರೆಸ್‌ ಪಕ್ಷವು ಅಲ್ಪಸಂಖ್ಯಾತ ಸಮುದಾಯದವರ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ಸೇರಿದ್ದ, ಮಾಜಿ ಸಚಿವ ಬುದ್ಧ ಧನ್‌ ಚಕ್ಮಾ ಅವರು ಟುಚಿವಾಂಗ್‌ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಬಿಜೆಪಿ, ಶೇ 8 ರಷ್ಟು ಮತ ಗಳಿಸಿದೆ.

ADVERTISEMENT

‘ಎಲ್ಲಿ ತಪ್ಪಾಗಿದೆ ಎಂಬುದು ಗೊತ್ತಾಗಿಲ್ಲ. ಜೆಪಿಎಂ ಅನ್ನು ಹಗುರವಾಗಿ ಪರಿಗಣಿಸಿದ್ದು ಇದಕ್ಕೆ ಕಾರಣವಿರಬಹುದು. ನಮ್ಮ ಅವಧಿಯಲ್ಲಿ ಮಿಜೋರಾಂ ಸಾಕಷ್ಟು ಅಭಿವೃದ್ಧಿಯಾಗಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಬೆಳವಣಿಗೆ ಹೊಂದಿರುವ ಅಗ್ರ ನಾಲ್ಕು ರಾಜ್ಯಗಳಲ್ಲಿ ಮಿಜೋರಾಂ ಸಹ ಒಂದಾಗಿದೆ’ ಎಂದು ಮುಖ್ಯಮಂತ್ರಿ ಲಾಲ್‌ ತನ್‌ಹವ್ಲಾ ಹೇಳಿದರು.

2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 34 ಹಾಗೂ ಎಂಎನ್‌ಎಫ್‌ ಕೇವಲ 5 ಸ್ಥಾನಗಳನ್ನು ಪಡೆದಿದ್ದವು.ಮಿಜೋರಾಂ ಪೂರ್ಣ ಪ್ರಮಾಣದ ರಾಜ್ಯವಾದ ನಂತರ 1987ರಿಂದ ಯಾವುದೇ ಪಕ್ಷಗಳು ಸತತ ಮೂರು ಬಾರಿ ಅಧಿಕಾರದ ಗದ್ದುಗೆ ಹಿಡಿದಿಲ್ಲ.

‘ಜೆಪಿಎಂ ಕಾಂಗ್ರೆಸ್ ಮತಗಳನ್ನು ವಿಭಜಿಸಿದೆ. ಮದ್ಯದ ಮೇಲೆ ಹೇರಿದ್ದ ನಿಷೇಧವನ್ನು ಹಿಂದಕ್ಕೆ ಪಡೆದಿದ್ದು ಸೋಲಿಗೆ ಕಾರಣ’ ಎಂದು ಕಾಂಗ್ರೆಸ್‌ ನಾಯಕರು ವಿಶ್ಲೇಷಿಸಿದ್ದಾರೆ.

‘25 ರಿಂದ 30 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು, ಅದು ನಿಜವಾಗಿದೆ. ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಅದನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ. ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ನನ್ನ ಮೊದಲ ಆದ್ಯತೆಯಾಗಿದೆ’ ಎಂದು ಎಂಎನ್‌ಎಫ್‌ ಅಧ್ಯಕ್ಷಜೋರಾಮ್‌ತಂಗಾ ಹೇಳಿದರು. ಎಂಎನ್‌ಎಫ್‌ ಶೇ 37.6 ರಷ್ಟು ಮತ ಗಳಿಸಿದೆ. ಕಾಂಗ್ರೆಸ್‌ ಶೇ 30.2 ರಷ್ಟು ಮತ ಪಡೆದಿದೆ. ಜೆಪಿಎಂ ಶೇ 22.9 ರಷ್ಟು ಮತ ಪಡೆದಿದೆ.ಮಿಜೋರಾಂ ವಿಧಾನಸಭೆಯ ಮಾಜಿ ಅಧ್ಯಕ್ಷ ಹಿಫೆಯಿ ಅವರು ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿ ಪಾಲಕ್‌ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದಾರೆ.

ಶಾಸಕಾಂಗ ಪಕ್ಷದ ನಾಯಕರಾಗಿ ಜೋರಾಮ್‌ತಂಗಾ ಆಯ್ಕೆ: ಎಂಎನ್‌ಎಫ್‌ ನೂತನ ಶಾಸಕರು ಸಭೆ ನಡೆಸಿ, ಶಾಸಕಾಂಗ ಪಕ್ಷದ ನಾಯಕರನ್ನಾಗಿ 84 ವರ್ಷ ವಯಸ್ಸಿನ ಜೋರಾಮ್‌ಥಂಗ್‌ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು.

1998 ಹಾಗೂ 2003ರಲ್ಲಿ ಮುಖ್ಯಮಂತ್ರಿಯಾಗಿದ್ದಜೋರಾಮ್‌ತಂಗಾ ಅವರು, ರಾಜ್ಯಪಾಲ ಕೆ.ರಾಜಶೇಖರನ್‌ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.

1966 ರಿಂದ 1986ರವರೆಗೆ ಮಿಜೊ ಚಳವಳಿಯಲ್ಲಿಎಂಎನ್‌ಎಫ್‌ ನಾಯಕ ಲಾಲ್ದೆಂಗ್‌ ಜೊತೆಗೆ ಜೋರಾಮ್‌ತಂಗಾ ಸಹ ಇದ್ದರು. 1986ರಲ್ಲಿ ಕೇಂದ್ರದ ಜೊತೆಗೆ ಮಿಜೋರಾಂನಲ್ಲಿ ಶಾಂತಿ ನೆಲೆಸಲು ಒಡಂಬಡಿಕೆಗೆ ಸಹಿ ಮಾಡಿದ ನಂತರ ಹಿಂಸಾತ್ಮಕ ಹೋರಾಟವನ್ನು ಎಂಎನ್‌ಎಫ್‌ ತ್ಯಜಿಸಿತ್ತು.ನಂತರ ಎಂಎನ್‌ಎಫ್‌ ನಾಯಕ ಲಾಲ್ದೆಂಗ್‌ ಮಖ್ಯಮಂತ್ರಿಯಾದರು. 1990ರಲ್ಲಿ ಲಾಲ್ದೆಂಗ್‌ ಮೃತಪಟ್ಟ ನಂತರ ಎಂಎನ್‌ಎಫ್‌ ಅಧ್ಯಕ್ಷ ಹುದ್ದೆಯನ್ನು ಜೋರಾಮ್‌ತಂಗಾ ವಹಿಸಿಕೊಂಡಿದ್ದರು.

ಸದ್ಯ ಬಿಜೆಪಿ ನೇತೃತ್ವದ ಈಶಾನ್ಯ ಡೆಮಾಕ್ರೆಟಿಕ್‌ ಒಕ್ಕೂಟದ (ಎನ್‌ಇಡಿಎ) ಮೈತ್ರಿಯಲ್ಲಿ ಎಂಎನ್‌ಎಫ್‌ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.