ADVERTISEMENT

ಅಸ್ಸಾಂ ಸಿ.ಎಂ ವಿರುದ್ಧ ಪ್ರಕರಣ ಹಿಂಪಡೆಯಲು ಸಿದ್ಧ: ಮಿಜೋರಾಂ ಸರ್ಕಾರ

ಪಿಟಿಐ
Published 1 ಆಗಸ್ಟ್ 2021, 9:12 IST
Last Updated 1 ಆಗಸ್ಟ್ 2021, 9:12 IST
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ   

ಐಜ್ವಾಲ್‌: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ಹಿಂಪಡೆಯಲು ಮಿಜೋರಾಂ ಸರ್ಕಾರ ಸಿದ್ಧವಾಗಿದೆ ಎಂದು ಅಲ್ಲಿನ ಮುಖ್ಯ ಕಾರ್ಯದರ್ಶಿ ಲಾಲ್‌ನುನ್‌ಮಾವಿಯಾ ಚುವಾಂಗೊ ಭಾನುವಾರ ತಿಳಿಸಿದರು.

ಮುಖ್ಯಮಂತ್ರಿ ಝೋರಮತಾಂಗ್‌ ಅವರು ಸಹ ಎಫ್‌ಐಆರ್‌ನಲ್ಲಿ ಶರ್ಮಾ ಅವರ ಹೆಸರನ್ನು ಸೇರಿಸುವುದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಅವರು ಹೇಳಿದರು.

‘ವಾಸ್ತವವಾಗಿ, ಎಫ್ಐಆರ್‌ನಲ್ಲಿ ಅಸ್ಸಾಂ ಮುಖ್ಯಮಂತ್ರಿ ಹೆಸರನ್ನು ಉಲ್ಲೇಖಿಸಲು ನಮ್ಮ ಮುಖ್ಯಮಂತ್ರಿ ನಿಜವಾಗಿಯೂ ಒಪ್ಪಿಗೆ ನೀಡಿಲ್ಲ. ಈ ಕುರಿತು ಪರಿಶೀಲಿಸುವಂತೆ ಅವರು ನನಗೆ ಸೂಚಿಸಿದ್ದಾರೆ’ ಎಂದು ಚುವಾಂಗೊ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಈ ಕುರಿತು ಸಂಬಂಧಪಟ್ಟ ಪೊಲೀಸ್‌ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ’ ಎಂದ ಅವರು, ಅಸ್ಸಾಂ ಮುಖ್ಯಮಂತ್ರಿಯ ವಿರುದ್ಧ ಅವರ ಆರೋಪಗಳನ್ನು ದೃಢೀಕರಿಸಲು ಯಾವುದೇ ಕಾನೂನು ಮಾನ್ಯತೆ ಇಲ್ಲದಿದ್ದರೆ ಅವರ ಹೆಸರನ್ನು ತಗೆಸುವುದಾಗಿ ಮಾಹಿತಿ ನೀಡಿದರು.

‘ಶರ್ಮಾ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾದ ವಿಷಯ ನನಗೆ ಆಗ ಗೊತ್ತಿರಲಿಲ್ಲ. ನಂತರವಷ್ಟೇ ಆ ವಿಷಯ ತಿಳಿಯಿತು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆರು ಅಸ್ಸಾಂ ಅಧಿಕಾರಿಗಳು ಮತ್ತು 200 ಅಪರಿಚಿತ ಪೊಲೀಸ್ ಸಿಬ್ಬಂದಿ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲಾಗುತ್ತದೆಯೇ ಎಂಬುದರ ಕುರಿತು ಮುಖ್ಯ ಕಾರ್ಯದರ್ಶಿ ಯವುದೇ ಉಲ್ಲೇಖ ಮಾಡಲಿಲ್ಲ.

ಮಿಜೋರಾಂ ಪೊಲೀಸರು ಬಿಸ್ವಾ ಶರ್ಮಾ‌, ನಾಲ್ವರು ಹಿರಿಯ ಅಸ್ಸಾಂ ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ಅಧಿಕಾರಿಗಳ ವಿರುದ್ಧ ‘ಕೊಲೆ ಯತ್ನ’, ‘ಅಪರಾಧ ಸಂಚು’ ಮತ್ತು ‘ಹಲ್ಲೆ’ ಸೇರಿದಂತೆ ವಿವಿಧ ಆರೋಪಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಗಡಿ ವಿಚಾರವಾಗಿ ಮಿಜೋರಾಂನ ಕೊಲಾಸಿಬ್‌ ಜಿಲ್ಲೆಯ ವೈರೆಂಗತೆ ಪಟ್ಟಣದ ಹೊರವಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜುಲೈ 26ರಂದು ವೈರೆಂಗತೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಎರಡೂ ರಾಜ್ಯಗಳ ನಡುವಿನ ಗಡಿ ವಿವಾದದ ನಡುವೆಯೇ ನಡೆದ ಹಿಂಸಾಚಾರದಲ್ಲಿ ಆರು ಪೊಲೀಸ್ ಸಿಬ್ಬಂದಿ ಸೇರಿದಂತೆ ಅಸ್ಸಾಂನ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.