ಐಜ್ವಾಲ್ (ಮಿಜೋರಾಂ): ಮಿಜೋರಾಂ ರಾಜ್ಯದ ರಾಜಧಾನಿ ಐಜ್ವಾಲ್‌ಗೆ ಸಂಪರ್ಕಿಸುವ ರೈಲು ಮಾರ್ಗ ಕಣಿವೆಗಳ ನಡುವೆ ಅತ್ಯಧಿಕ ಸೇತುವೆ ಮತ್ತು ಸುರಂಗಗಳೊಂದಿಗೆ ಸಿದ್ಧಗೊಂಡಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ.
ಈಶಾನ್ಯ ಭಾರತದ ರಾಜ್ಯಗಳ ರಾಜಧಾನಿಗಳಿಗೆ ರೈಲು ಸಂಪರ್ಕ ಇರಲಿಲ್ಲ. ಅರುಣಾಚಲಪ್ರದೇಶವನ್ನು ಹೊರತುಪಡಿಸಿ ಉಳಿದ ಏಳು ರಾಜ್ಯಗಳ ರಾಜಧಾನಿಗಳಿಗೆ ರೈಲು ಸಂಪರ್ಕ ಕಾಮಗಾರಿಗೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಮಿಜೋರಾಂನ ರಾಜಧಾನಿ ಐಜ್ವಾಲ್ ಕಡಿದಾದ ಬೆಟ್ಟಗಳ ಮೇಲೆ ಇರುವುದರಿಂದ ರೈಲು ಸಂಪರ್ಕ ಕಾಮಗಾರಿ ನಿಧಾನವಾಗಿ ನಡೆದಿದ್ದು, 11 ವರ್ಷಗಳ ಬಳಿಕ ಪೂರ್ಣಗೊಂಡಿದೆ.
ಅಸ್ಸಾಂನಿಂದ ಮಿಜೋರಾಂನ ಬೈರಾಬಿವರೆಗೆ ಬ್ರಾಡ್‌ಗೇಜ್ ರೈಲು ಮಾರ್ಗ 2016ರಲ್ಲಿ ನಿರ್ಮಾಣವಾಗಿತ್ತು. ಬೈರಾಬಿಗೆ ಮೊದಲ ಸರಕು ರೈಲು ಆ ವರ್ಷ ಬಂದಿತ್ತು. ಇದುವೇ ರಾಜ್ಯದ ಮೊದಲ ರೈಲು ಆಗಿತ್ತು. ಇದೀಗ ಬೈರಾಬಿಯಿಂದ ಐಜ್ವಾಲ್‌ನ ಸೈರಾಂಗ್‌ವರೆಗೆ ರೈಲು ಮಾರ್ಗವಾಗಿದ್ದು, ಸರಕು ರೈಲುಗಳಲ್ಲದೇ ಪ್ರಯಾಣಿಕರ ರೈಲುಗಳೂ ಸಂಚರಿಸಲಿವೆ.
51.38 ಕಿ.ಮೀ. ಉದ್ದದ ಈ ಮಾರ್ಗದಲ್ಲಿ 48 ಸುರಂಗ ಮಾರ್ಗಗಳು, 55 ದೊಡ್ಡ ಸೇತುವೆಗಳು, 88 ಸಣ್ಣ ಸೇತುವೆಗಳಿವೆ. 1.86 ಕಿ.ಮೀ. ಉದ್ದದ ಸುರಂಗ ಮಾರ್ಗವು ದೊಡ್ಡ ಸುರಂಗ ಮಾರ್ಗವಾಗಿದ್ದರೆ, 114 ಮೀಟರ್ ಎತ್ತರದ ದೊಡ್ಡ ಸೇತುವೆಯೂ ಇದೆ. ಒಟ್ಟು ಆರು ಸೇತುವೆಗಳು ದೆಹಲಿಯ ಕುತಬ್ ಮೀನಾರ್‌ಗಿಂತ (72 ಮೀಟರ್) ಅಧಿಕ ಎತ್ತರವನ್ನು ಹೊಂದಿವೆ.
‘ಐಜ್ವಾಲ್ ಮತ್ತು ಕೊಲಸಿಬ್ ಜಿಲ್ಲೆಗಳಲ್ಲಿ ಸಾಗುವ ಈ ಮಾರ್ಗವನ್ನು ₹8,071 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬೈರಾಬಿ, ಹೋರ್ಟೋಕಿ, ಕವನ್‌ಪುವಿ, ಮುಆಲ್ಖಾಂಗ್ ಮತ್ತು ಸೈರಾಂಗ್ ನಿಲ್ದಾಣಗಳಿವೆ. ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಒಂದೆರಡು ವಾರದಲ್ಲಿ ಉದ್ಘಾಟನೆಗೆ ಪ್ರಧಾನಿ ಕಚೇರಿಯಿಂದ ದಿನಾಂಕ ನಿಗದಿಯಾಗಲಿದೆ’ ಎಂದು ಈಶಾನ್ಯ ಗಡಿನಾಡು ರೈಲ್ವೆ (ನಾರ್ತ್ ಈಸ್ಟ್ ಫ್ರಾಂಟಿಯರ್ ರೈಲ್ವೆ) ಅಧಿಕಾರಿ ಕಪಿಂಜಲ್ ಕೆ. ಶರ್ಮ ಮಾಹಿತಿ ನೀಡಿದರು.
‘ದಟ್ಟ ಅರಣ್ಯ, ಕಠಿಣ ಗುಡ್ಡಗಾಡು, ಆಳವಾದ ಕಣಿವೆಗಳ ಮೂಲಕ ರೈಲು ಮಾರ್ಗ ಸಾಗುವುದರಿಂದ ಕಾಮಗಾರಿಯು ಸವಾಲಿನದ್ದಾಗಿತ್ತು. ಸುರಂಗಗಳಲ್ಲಿ ಬ್ಯಾಲೆಸ್ಟ್‌ಲೆಸ್ ಹಳಿ ಅಳವಡಿಸಲಾಗಿದೆ. ಸುರಂಗಗಳ ಪ್ರವೇಶ ಭಾಗಗಳಲ್ಲಿ ಮಿಜೋರಾಂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾಕೃತಿಗಳನ್ನು ರಚಿಸಲಾಗಿದೆ. ಮಿಜೋ ಜನರ ಉಡುಪು, ಹಬ್ಬ, ಸಂಪ್ರದಾಯ, ಹಳ್ಳಿಗಳ ಜೀವನ ಶೈಲಿ, ರಾಜ್ಯದ ಸಸ್ಯಜೀವಿ ಮತ್ತು ಪ್ರಾಣಿಜೀವಿಗಳ ಚಿತ್ರಣ ನೀಡಲಾಗಿದೆ’ ಎಂದು ಹೇಳಿದರು.
‘ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಇದಾಗಿದ್ದು, ಐಜ್ವಾಲ್‌ನಿಂದ ಗಡಿಭಾಗಗಳಿಗೂ ವಿಸ್ತರಿಸಲು ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ’ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ರಾಧಾರಾಣಿ ಮಾಹಿತಿ ನೀಡಿದರು.
‘ಸನ್ನಿವೇಶ ಬದಲಾಗುವ ನಿರೀಕ್ಷೆ’
‘ಸಂಪರ್ಕವು ರಾಜ್ಯದ ಬಹಳ ದೊಡ್ಡ ಸಮಸ್ಯೆಯಾಗಿತ್ತು. ರೈಲು ಸಂಪರ್ಕದಿಂದ ಆರ್ಥಿಕ ಪರಿಸ್ಥಿತಿ ಬದಲಾಗುವ ನಿರೀಕ್ಷೆ ಇದೆ. ಜೊತೆಗೆ ಸಾಮಾಜಿಕ ಪಲ್ಲಟವೂ ಉಂಟಾಗಲಿದೆ. ಎಲ್ಲದಕ್ಕೂ ಅಸ್ಸಾಂ ರಾಜ್ಯವನ್ನು ಅವಲಂಬಿಸುವುದು ಕಡಿಮೆಯಾಗಲಿದೆ’ ಎಂದು ಮಿಜೋರಾಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಡಾಲ್ಫ್ ಹಿಟ್ಲರ್ ಸೈಟೊ ಅಭಿಪ್ರಾಯ ವ್ಯಕ್ತಪಡಿಸಿದರು.
(ರೈಲ್ವೆ ಇಲಾಖೆಯ ಆಮಂತ್ರಣದ ಮೇರೆಗೆ ಪ್ರತಿನಿಧಿ ಮಿಜೋರಾಂಗೆ ತೆರಳಿದ್ದರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.