ADVERTISEMENT

Nagpur Violence ಯೋಜಿತ ಕೃತ್ಯ,‘ಛಾವಾ’ ಚಿತ್ರದಿಂದ ಔರಂಗಜೇಬ್ ಮೇಲೆ ಸಿಟ್ಟು: CM

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮಾರ್ಚ್ 2025, 11:00 IST
Last Updated 18 ಮಾರ್ಚ್ 2025, 11:00 IST

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್    

ನಾಗ್ಪುರ: ನಾಗ್ಪುರದಲ್ಲಿ ನಡೆದ ಕೋಮು ಹಿಂಸಾಚಾರವು ಪೂರ್ವಯೋಜಿತ ಪಿತೂರಿಯಂತೆ ಕಾಣುತ್ತಿದೆ. ಉದ್ರಿಕ್ತರ ಗುಂಪು ನಿರ್ದಿಷ್ಟ ಮನೆಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮಂಗಳವಾರ ಹೇಳಿದ್ದಾರೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಟ್ರಾಲಿ ತುಂಬಾ ಕಲ್ಲು ಮತ್ತು ಮಾರಕಾಸ್ತ್ರಗಳನ್ನು ತಂದು ದಾಳಿ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಫಡಣವೀಸ್, ಹಿಂಸಾಚಾರದಲ್ಲಿ ಮೂವರು ಪೊಲೀಸ್ ಉಪ ಆಯುಕ್ತರು ಸೇರಿದಂತೆ 33 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಹಿರಿಯ ಅಧಿಕಾರಿಗಳಲ್ಲಿ ಒಬ್ಬರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

‘ನಾಗ್ಪುರದ ಕೆಲವು ಭಾಗಗಳಲ್ಲಿ ಸಾಮಾಜಿಕ ಸಾಮರಸ್ಯವನ್ನು ಕದಡುವ ಉದ್ದೇಶದಿಂದ ಜನರ ಗುಂಪೊಂದು ಯೋಜಿತ ಮಾದರಿಯಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ಮೂವರು ಡಿಸಿಪಿಗಳು ಸೇರಿದಂತೆ ಮೂವತ್ಮೂರು ಪೊಲೀಸ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಐದು ನಾಗರಿಕರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರನ್ನು ಐಸಿಯುಗೆ ದಾಖಲಿಸಲಾಗಿದೆ’ಎಂದು ಫಡಣವೀಸ್ ಹೇಳಿದ್ದಾರೆ.

‘ಪೊಲೀಸರ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವವರು ಯಾವುದೇ ಧರ್ಮದವರಾಗಿದ್ದರೂ ಸರಿ ಸುಮ್ಮನೆ ಬಿಡುವುದಿಲ್ಲ’ಎಂದು ಗೃಹ ಖಾತೆಯನ್ನೂ ಹೊಂದಿರುವ ಫಡಣವೀಸ್ ಹೇಳಿದ್ದಾರೆ.

ನಾಗ್ಪುರದಲ್ಲಿ ಕರ್ಫ್ಯೂ

ಸೋಮವಾರ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿ ತೆರವುಗೊಳಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದ ನಂತರ ನಾಗ್ಪುರ ನಗರದ ಹಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಹಿಂಸಾಚಾರದಲ್ಲಿ ಹಲವು ಮನೆಗಳು ಮತ್ತು ವಾಹನಗಳನ್ನು ಧ್ವಂಸಗೊಳಿಸಲಾಗಿದೆ.

‘ಛಾವಾ’ ಚಿತ್ರ ಉಲ್ಲೇಖ

ನಾಗ್ಪುರ ಹಿಂಸಾಚಾರದಿಂದ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಫಡ್ನಣವೀಸ್ ಔರಂಗಜೇಬ್ ವಿರುದ್ಧದ ಜನರ ಕೋಪಕ್ಕೆ ‘ಛಾವಾ’ಚಿತ್ರ ಕಾರಣ ಎಂದು ಹೇಳಿದ್ದು, ಜನರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

"ಛಾವಾ ಚಿತ್ರವು ಔರಂಗಜೇಬ್ ವಿರುದ್ಧ ಜನರ ಕೋಪವನ್ನು ಹೊತ್ತಿಸಿದೆ. ಆದರೂ, ಎಲ್ಲರೂ ಮಹಾರಾಷ್ಟ್ರದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು. ಯಾರಾದರೂ ಗಲಭೆ ಮಾಡಿದರೆ, ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ನಾವು ಕ್ರಮ ಕೈಗೊಳ್ಳುತ್ತೇವೆ’ ಎಂದು ಮಹಾರಾಷ್ಟ್ರ ಸಿಎಂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.