ADVERTISEMENT

ಭಾರತೀಯ ನೌಕಾಪಡೆಗೆ 17 ಹಡಗುಗಳ ಖರೀದಿಗೆ ಒ‍‍ಪ್ಪಂದ

₹19,600 ಕೋಟಿ ಮೊತ್ತದ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಸಹಿ; 2026ರಿಂದ ಹಡಗುಗಳ ಪೂರೈಕೆ ಆರಂಭ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 6:37 IST
Last Updated 31 ಮಾರ್ಚ್ 2023, 6:37 IST
   

ನವದೆಹಲಿ: ಭಾರತೀಯ ನೌಕಾಪಡೆಗೆ ಮುಂದಿನ ಪೀಳಿಗೆಯ 11 ಕರಾವಳಿ ಕಾವಲು ಹಡಗುಗಳು ಮತ್ತು ಕ್ಷಿಪಣಿ ಸಜ್ಜಿತ ಆರು ಹಡಗುಗಳನ್ನು ಸುಮಾರು ₹19,600 ಕೋಟಿ ವೆಚ್ಚದಲ್ಲಿ ಖರೀದಿಸುವ ಒಪ್ಪಂದಗಳಿಗೆ ರಕ್ಷಣಾ ಸಚಿವಾಲಯವು ಭಾರತೀಯ ಹಡಗುಕಟ್ಟೆಗಳೆ ಜತೆಗೆ ಗುರುವಾರ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

11 ಹಡಗುಗಳ ಪೈಕಿ ಏಳು ಹಡಗುಗಳನ್ನು ಗೋವಾ ಶಿಪ್‌ಯಾರ್ಡ್‌ ಲಿಮಿಟೆಡ್‌ (ಜಿಎಸ್‌ಎಲ್‌) ಮತ್ತು ಉಳಿದ ನಾಲ್ಕು ಹಡಗುಗಳನ್ನು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್‌ ಆಂಡ್‌ ಎಂಜಿನಿಯರ್ಸ್‌ (ಜಿಆರ್‌ಎಸ್‌ಇ) ದೇಶೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಿವೆ. ಈ ಹಡಗುಗಳ ಪೂರೈಕೆ 2026ರ ಸೆಪ್ಟೆಂಬರ್‌ನಿಂದ ಆರಂಭವಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

₹9,781 ಕೋಟಿ ವೆಚ್ಚದಲ್ಲಿ ಕರಾವಳಿ ಕಾವಲಿಗೆ 11 ಹಡಗುಗಳನ್ನು ಜಿಎಸ್‌ಎಲ್‌ ಮತ್ತು ಜಿಆರ್‌ಎಸ್‌ಇ ಹಡಗು ಕಟ್ಟೆಗಳಿಂದ ಖರೀದಿಸಲಾಗುತ್ತಿದೆ. ಹಾಗೆಯೇ ಮುಂದಿನ ಪೀಳಿಗೆಯ ಕ್ಷಿಪಣಿ ಸಜ್ಜಿತ ಆರು ಹಡಗುಗಳನ್ನು (ಎನ್‌ಜಿಎಂವಿ) ₹9,805 ಕೋಟಿ ವೆಚ್ಚದಲ್ಲಿ ಖರೀದಿಸಲು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಸಿಎಸ್‌ಎಲ್) ಜತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಹಡಗುಗಳ ವಿತರಣೆ 2027ರ ಮಾರ್ಚ್‌ನಿಂದ ಪ್ರಾರಂಭವಾಗಲಿದೆ. ಈ ಹಡಗುಗಳ ನಿರ್ಮಾಣವು ಏಳೂವರೆ ವರ್ಷಗಳಲ್ಲಿ ಸುಮಾರು 1.10 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಿದೆ ಎಂದು ಅದು ಹೇಳಿದೆ.

ADVERTISEMENT

ಬಿಎಪಿಎಲ್‌ ಜತೆಗೆ ₹1,700 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ:

ಸಾಗರ ಕರಾವಳಿ ಕಾವಲಿಗೆ ಸಂಚಾರಿ ಬ್ಯಾಟರಿಗಳು (ದೂರ ವ್ಯಾಪ್ತಿ) ಮತ್ತು ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಬ್ರಹ್ಮೋಸ್‌ ಏರೋಸ್ಪೇಸ್‌ ಪ್ರೈವೆಟ್‌ ಲಿಮಿಟೆಡ್‌ (ಬಿಎಪಿಎಲ್‌) ಜತೆಗೆ ₹1,700 ಕೋಟಿ ಮೊತ್ತದ ಒಪ್ಪಂದಕ್ಕೂ ಗುರುವಾರ ಸಹಿ ಹಾಕಿದೆ.

ಈ ಬ್ಯಾಟರಿಗಳ ವಿತರಣೆ 2027ರಿಂದ ಪ್ರಾರಂಭವಾಗಲಿದೆ. ಈ ವ್ಯವಸ್ಥೆಗಳು ಸೂಪರ್‌ಸಾನಿಕ್‌ ಬ್ರಹ್ಮೋಸ್ ಕ್ಷಿಪಣಿಗಳನ್ನು ಹೊಂದಿದ್ದು, ಸಾಗರದಲ್ಲಿ ಹಲವು ದಿಕ್ಕುಗಳಿಂದ ದಾಳಿ ನಡೆಸುವ ಸಾಮರ್ಥ್ಯವನ್ನು ಇದು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ.

ಈ ಯೋಜನೆಯು ನಾಲ್ಕು ವರ್ಷಗಳ ಅವಧಿಯಲ್ಲಿ 90 ಸಾವಿರಕ್ಕೂ ಹೆಚ್ಚು ಮಾನವ ದಿನಗಳ ಉದ್ಯೋಗ ಸೃಷ್ಟಿಸಲಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.