ADVERTISEMENT

11 ವರ್ಷದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ, ಆಧುನೀಕರಣ: ಮೋದಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 13:54 IST
Last Updated 10 ಜೂನ್ 2025, 13:54 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ರಕ್ಷಣಾ ಕ್ಷೇತ್ರದಲ್ಲಿ ಕಳೆದ 11 ವರ್ಷಗಳ ಅವಧಿಯಲ್ಲಿ ಗಣನೀಯ ಬದಲಾವಣೆ ಆಗಿದ್ದು, ರಕ್ಷಣಾ ಪರಿಕರಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಮತ್ತು ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

‘ಎಕ್ಸ್‌’ ಜಾಲತಾಣದಲ್ಲಿ ಈ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘11 ವರ್ಷಗಳ ಅವಧಿಯಲ್ಲಿ ಆಧುನೀಕರಣ ಮತ್ತು ಸ್ವಾವಲಂಬನೆ ಸಾಧಿಸಲು ಸ್ಪಷ್ಟ ಆದ್ಯತೆ ಸಿಕ್ಕಿದೆ. ಭಾರತವನ್ನು ಸದೃಢಗೊಳಿಸುವಲ್ಲಿ ಜನರ ಸಕ್ರಿಯ ಭಾಗವಹಿಸುವಿಕೆ ನೋಡುವುದೇ ಸಂತೋಷದ ಸಂಗತಿಯಾಗಿದೆ’ ಎಂದಿದ್ದಾರೆ.

ಸರ್ಕಾರದ 11 ವರ್ಷಗಳ ಸಾಧನೆಯ ವಿವರ ಹಂಚಿಕೊಂಡಿರುವ ಅವರು, ‘ರಕ್ಷಣಾ ಸಾಮರ್ಥ್ಯ ವೃದ್ಧಿಯಲ್ಲಿ ಭಾರತವು ಕ್ರಾಂತಿಕಾರಕ ಸಾಧನೆ ಮಾಡಿದೆ. ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸಿದೆ. ಅಂತರಿಕ್ಷ ಕ್ಷೇತ್ರದಲ್ಲಿ ಚರಿತ್ರಾರ್ಹ ಮೈಲುಗಲ್ಲು ಸಾಧಿಸಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಆತ್ಮನಿರ್ಭರ ಭಾರತ ಸಂಕಲ್ಪದೊಂದಿಗೆ ಭಾರತವು ಈ ಸ್ವಾಲವಂಬನೆ ಸಾಧಿಸಿದೆ. ಇದರ ಪ್ರಭಾವವು ವಾಣಿಜ್ಯ ಮತ್ತು ತಂತ್ರಜ್ಞಾನ ಕ್ಷೇತ್ರದ ಮೇಲೂ ಆಗಿದೆ. ‘11 ವರ್ಷಗಳಲ್ಲಿ ಭಾರತದ ಸಾಧನೆ– ಸಾಮರ್ಥ್ಯ, ಪಾಲುದಾರಿಕೆ, ಅಭಿವೃದ್ಧಿ’ ಎಂದು ಮೋದಿ ಅವರು ಉಲ್ಲೇಖಿಸಿದ್ದಾರೆ.

ಭಾರತದ ರಕ್ಷಣಾ ರಫ್ತು ಪ್ರಮಾಣವು 2014-15ರಲ್ಲಿ ₹ 1,940 ಕೋಟಿ ಇದ್ದರೆ, 2024–25ನೇ ಸಾಲಿನ ವೇಳೆಗೆ ₹ 23,622 ಕೋಟಿ ಆಗಿದೆ. ಈ ಅವಧಿಯಲ್ಲಿ ದೇಶಿ ಉತ್ಪಾದನೆಯ ಐಎನ್‌ಎಸ್‌ ವಿಕ್ರಾಂತ್ ಅನ್ನು ಭಾರತ ಅನಾವರಣಗೊಳಿಸಿದೆ ಎಂದು ಸರ್ಕಾರದ ಸಾಧನೆ ಕುರಿತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.