ಜಾರ್ಸುಗಡ (ಒಡಿಶಾ): ‘ದೇಶದ ಜನರನ್ನು ಲೂಟಿ ಮಾಡುವ ಯಾವ ಅವಕಾಶವನ್ನೂ ಕಾಂಗ್ರೆಸ್ ಬಿಟ್ಟಿಲ್ಲ. ಅದು ಕಡಿಮೆ ಆದಾಯದ ವರ್ಗದ ಜನರ ಮೇಲೂ ತೆರಿಗೆ ಹೇರಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಒಡಿಶಾದ ಜಾರ್ಸುಗಡದಲ್ಲಿ ಶನಿವಾರ ನಡೆದ ‘ನಮೋ ಯುವ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ಸುಲಿಗೆ ಮಾಡುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಬಗ್ಗೆ ಜನರು ಜಾಗೃತರಾಗಿರಬೇಕು’ ಎಂದು ಕರೆ ನೀಡಿದರು.
‘ಎಷ್ಟರ ಮಟ್ಟಿಗೆ ಕಾಂಗ್ರೆಸ್ ಜನರನ್ನು ದೋಚಿದೆ ಎಂದರೆ, ಅದು ವಾರ್ಷಿಕ ₹2 ಲಕ್ಷ ಆದಾಯ ಹೊಂದಿರುವ ಜನರ ಮೇಲೂ ತೆರಿಗೆ ವಿಧಿಸಿತ್ತು. ಆದರೆ ಬಿಜೆಪಿ ಸರ್ಕಾರವು ತೆರಿಗೆ ವ್ಯಾಪ್ತಿಗೆ ಬರುವ ಆದಾಯದ ಮಿತಿಯನ್ನು ₹12 ಲಕ್ಷಕ್ಕೆ ಹೆಚ್ಚಿಸಿದೆ’ ಎಂದು ಅವರು ವಿವರಿಸಿದರು.
‘ಕೇಂದ್ರ ಸರ್ಕಾರವು ಜಿಎಸ್‌ಟಿ ಸುಧಾರಣೆ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟಿರುವುದನ್ನು ಸಹಿಸದ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಆರೋಪದಲ್ಲಿ ತೊಡಗಿದೆ’ ಎಂದು ಅವರು ದೂರಿದರು.
‘ನಮ್ಮ ಸರ್ಕಾರ ಸಿಮೆಂಟ್ ಮೇಲಿನ ಬೆಲೆ ಕಡಿಮೆಗೊಳಿಸಿದಾಗ, ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರವು ತನ್ನದೇ ಆದ ಪ್ರತ್ಯೇಕ ತೆರಿಗೆಯನ್ನು ಅದರ ಮೇಲೆ ಹೇರಿತು. ನಾವು ಜಿಎಸ್‌ಟಿ ದರವನ್ನು ಕಡಿತಗೊಳಿಸಿದ ಬಳಿಕ ದೇಶದಾದ್ಯಂತ ಬೆಲೆಗಳಲ್ಲಿ ಇಳಿಕೆಯಾಗಿದೆ. ಆದರೆ ಇದರ ಲಾಭವನ್ನು ಸಾಮಾನ್ಯ ಜನರಿಗೆ ನೀಡಲು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಬಯಸುತ್ತಿಲ್ಲ’ ಎಂದು ಅವರು ಕಿಡಿಕಾರಿದರು.
‘ಆತ್ಮನಿರ್ಭರ ಭಾರತ’ದ ಅಗತ್ಯವನ್ನು ಒತ್ತಿ ಹೇಳಿದ ಮೋದಿ, ‘ಚಿಪ್ ಇಂದ ಶಿಪ್ ತನಕ ಎಲ್ಲವನ್ನೂ ನಾವೇ ತಯಾರಿಸಬೇಕು. ಭಾರತ ಎಲ್ಲ ಕ್ಷೇತ್ರಗಳಲ್ಲೂ ಸ್ವಾವಲಂಬನೆ ಸಾಧಿಸಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
ಒಡಿಶಾದಲ್ಲಿ ಎರಡು ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.
2024ರಲ್ಲಿ ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮೋದಿ ಅವರು ರಾಜ್ಯಕ್ಕೆ ನೀಡಿದ ಆರನೇ ಭೇಟಿ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.