
ಅಸ್ಸಾಂನ ನಾಮರೂಪದಲ್ಲಿ ಬ್ರೌನ್‌ಫೀಲ್ಡ್ ಅಮೋನಿಯಾ– ಯೂರಿಯಾ ಘಟಕಕ್ಕೆ ಶಂಕುಸ್ಥಾನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸಭಿಕರತ್ತ ಕೈಬೀಸಿದರು. ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪಾಲ್ಗೊಂಡಿದ್ದರು
–ಪಿಟಿಐ ಚಿತ್ರ
ನಾಮರೂಪ (ಅಸ್ಸಾಂ): ‘ಕಾಂಗ್ರೆಸ್ ಪಕ್ಷವು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಿಗಿದ್ದು, ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಅಸ್ಸಾಂನಲ್ಲಿ ನೆಲಸಲು ನೆರವು ನೀಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆರೋಪಿಸಿದರು.
ದಿಬ್ರುಗಢ ಜಿಲ್ಲೆಯ ನಾಮರೂಪದಲ್ಲಿ ₹10,601 ಕೋಟಿ ವೆಚ್ಚದಲ್ಲಿ ಬ್ರೌನ್‌ಫೀಲ್ಡ್ ಅಮೋನಿಯಾ– ಯೂರಿಯಾ ಘಟಕಕ್ಕೆ ಶಂಕುಸ್ಥಾನೆ ನೆರವೇರಿಸಿ ಅವರು ಮಾತನಾಡಿದರು. 2030ರ ವೇಳೆಗೆ ಈ ಘಟಕ ಕಾರ್ಯಾರಂಭ ಮಾಡಲಿದ್ದು, 12.7 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ.
‘ಇಲ್ಲಿನ ಹಳೆ ಘಟಕವನ್ನು ಆಧುನೀಕರಿಸಲು ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಯಾವುದೇ ಪ್ರಯತ್ನ ಮಾಡಲಿಲ್ಲ’ ಎಂದು ಅವರು ವಾಗ್ದಾಳಿ ನಡೆಸಿದರು.
‘ವಿರೋಧ ಪಕ್ಷವು ಅಸ್ಸಾಂ ಜನರ ಗುರುತು, ಅಸ್ತಿತ್ವ ಮತ್ತು ಹೆಮ್ಮೆಯ ಬಗ್ಗೆ ಕಾಳಜಿ ಹೊಂದಿಲ್ಲ. ಹಾಗಾಗಿಯೇ ಅದು ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿರೋಧಿಸುತ್ತಿದೆ. ಅದಕ್ಕೆ ಅಧಿಕಾರ ಕಸಿದುಕೊಳ್ಳುವ ಬಯಕೆ ಮಾತ್ರ ಇದೆ. ಆದರೆ, ಬಿಜೆಪಿಯು ಅಸ್ಸಾಂ ಜನರ ಗುರುತು ಮತ್ತು ಹಿರಿಮೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ’ ಎಂದು ಅವರು ಪ್ರತಿಪಾದಿಸಿದರು.
‘ಶತಮಾನಗಳ ಹಿಂದೆ ಅಹೋಮ್ ರಾಜವಂಶದ ಕಾಲದಲ್ಲಿ ಅಸ್ಸಾಂ ಹೇಗೆ ಶಕ್ತಿಯುತವಾಗಿತ್ತೋ, ಹಾಗೆಯೇ ರಾಜ್ಯವನ್ನು ಬಲಿಷ್ಠಗೊಳಿಸುವ ಗುರಿಯನ್ನು ಬಿಜೆಪಿ ಸರ್ಕಾರ ಹೊಂದಿದೆ’ ಎಂದು ಪ್ರಧಾನಿ ಹೇಳಿದರು.
ಕೈಗಾರಿಕೀಕರಣ ಮತ್ತು ಸಂಪರ್ಕ ಕ್ರಾಂತಿಯು ಅಸ್ಸಾಂ ಜನರ ಕನಸುಗಳನ್ನು ನನಸು ಮಾಡುತ್ತಿದೆ. ಇದಕ್ಕಾಗಿ ಡಬಲ್ ಎಂಜಿನ್ ಸರ್ಕಾರ ನಿರಂತರ ಶ್ರಮಿಸುತ್ತಿದೆ ಎಂದು ಮೋದಿ ಹೇಳಿದರು.
ಹುತಾತ್ಮರಿಗೆ ಗೌರವ ಸಮರ್ಪಣೆ
ಗುವಾಹಟಿ: ಅಕ್ರಮ ವಲಸಿಗರ ವಿರುದ್ಧ ಅಸ್ಸಾಂನಲ್ಲಿ ನಡೆದಿದ್ದ ಚಳವಳಿಯಲ್ಲಿ ಹುತಾತ್ಮರಾದವರಿಗಾಗಿ ನಿರ್ಮಿಸಿರುವ ‘ಸ್ವಹಿದ್ ಸ್ಮಾರಕ ಕ್ಷೇತ್ರ’ಕ್ಕೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಮರ್ಪಣೆ ಮಾಡಿದರು.
ಆರು ವರ್ಷಗಳ ಕಾಲ ನಡೆದ ಈ ಚಳವಳಿಯು 1985ರಲ್ಲಿ ಕೊನೆಗೊಂಡಿತ್ತು. ಈ ವೇಳೆ 860 ಮಂದಿ ಹುತಾತ್ಮರಾಗಿದ್ದರು. ಈ ಹುತಾತ್ಮರ ಸ್ಮಾರಕಕ್ಕೆ ಮೋದಿ ಪುಷ್ಪನಮನ ಸಲ್ಲಿಸಿದರು.
ಚಳವಳಿಯ ಮೊದಲ ಹುತಾತ್ಮ ಖರ್ಗೇಶ್ವರ ತಾಲೂಕ್‌ದಾರ್ ಅವರ ಪುತ್ಥಳಿಗೆ ಮಾಲೆ ಅರ್ಪಿಸಿ ನಮಿಸಿದರು. ಈ ವೇಳೆ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.