ADVERTISEMENT

ಚೌಕಿದಾರನನ್ನು ನಿಂದಿಸುವವರು ಕೋರ್ಟಿನಿಂದ ಜಾಮೀನು ಪಡೆದು ಹೊರಗಿದ್ದಾರೆ-ಮೋದಿ

ರಾಹುಲ್, ಸೋನಿಯಾ ವಿರುದ್ಧ ಪರೋಕ್ಷ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 11:28 IST
Last Updated 30 ಮಾರ್ಚ್ 2019, 11:28 IST
ಅರುಣಾಚಲಪ್ರದೇಶದಲ್ಲಿ ಮೋದಿ: Courtesy - ANI
ಅರುಣಾಚಲಪ್ರದೇಶದಲ್ಲಿ ಮೋದಿ: Courtesy - ANI   

ಅರುಣಾಚಲಪ್ರದೇಶ:'ಚೌಕಿದಾರ್‌ನನ್ನು ನಿಂದಿಸುವವರು ಈಗ ಕೋರ್ಟ್ ಜಾಮೀನು ಪಡೆದು ಹೊರಗಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಕುಳಿತುಕೊಂಡು, ತೆರಿಗೆ ವಂಚಿಸಿ ರೈತರ ಜಮೀನನ್ನು ದೋಚಿದವರು, ಸರ್ಕಾರಿ ಭೂಮಿಯನ್ನು ಪಡೆದು ಅದನ್ನು ಲಕ್ಷಾಂತರ ರೂಪಾಯಿಗಳಿಗೆ ಪತ್ರಿಕೆಗಳಿಗೆ ಬಾಡಿಗೆ ಕೊಟ್ಟವರು, ಅಲ್ಲದೆ, ಸೇನೆಗೆ ಸಂಬಂಧಿಸಿದಂತೆ ಡೀಲ್ ಮಾಡಿ ಅದರಿಂದ ಕಮಿಷನ್ಪಡೆದವರು ಇವರು, ಇವರು ರಾಜಕೀಯ ಮುಖಂಡರು. ಇಂತಹವರು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗೆ ಇದ್ದಾರೆ. ಅವರಿಗೆ ಇದೆಲ್ಲಾ ಗೊತ್ತಿದ್ದರೂ ಈ ಚೌಕಿದಾರನನ್ನು ಮಾತ್ರನಿಂದಿಸುತ್ತಾರೆ ಎಂದು ತೀವ್ರ ಟೀಕಾಪ್ರಹಾರ ನಡೆಸಿದರು.

ಅರುಣಾಚಲ ಪ್ರದೇಶದ ವೆಸ್ಟ್ ಜಿಯಾಂಗ್ ಜಿಲ್ಲೆಯ ಐಟಿಬಿಪಿ ಮೈದಾನದಲ್ಲಿ ಬಿಜೆಪಿ ಶನಿವಾರ ಏರ್ಪಡಿಸಿದ್ದ ಚುನಾವಣಾ ರ‌್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಹಾಗೂ ಸೋನಿಯಾ ಹೆಸರು ಹೇಳದೆ ಟೀಕಾ ಪ್ರಹಾರ ನಡೆಸಿದರು.

ADVERTISEMENT

ಅರುಣಾಚಲ ಪ್ರದೇಶದಲ್ಲಿ ಇದು ಮೋದಿಯವರ ಮೊದಲ ಚುನಾವಣಾ ರ‌್ಯಾಲಿಯಾಗಿದ್ದು, ಈಶಾನ್ಯ ಭಾರತದ ಅರುಣಾಚಲ ಪ್ರದೇಶವನ್ನು ಕಾಂಗ್ರೆಸ್ ಆಡಳಿತದಲ್ಲಿ ತೀವ್ರ ನಿರ್ಲಕ್ಷ್ಯದಿಂದ ಕಾಣಲಾಗಿತ್ತು. ಅರುಣಾಚಲ ಪ್ರದೇಶಕ್ಕೆ ಆಧುನಿಕ ಮೂಲ ಸೌಕರ್ಯಗಳು ಬೇಕು ಎಂದುಹಲವು ದಶಕಗಳಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ, ಅರುಣಾಚಲ ಪ್ರದೇಶವನ್ನು ಅಭಿವೃದ್ಧಿಪಡಿಸಲಿಲ್ಲ. ಈ ನಾಮಧಾರಿ ಪರಿವಾರದವರು ತಮ್ಮ ಸ್ವಂತ ಕಟ್ಟಡಗಳನ್ನು ನಿರ್ಮಿಸಿಕೊಳ್ಳುವುದರಲ್ಲಿ ನಿರತರಾದರು. ನಿಮ್ಮ ಬಗ್ಗೆ ಗಮನಹರಿಸಲಿಲ್ಲ. ಅದರ ಬದಲು ತಮಗೆ ತಮ್ಮ ಕುಟುಂಬದವರಿಗೆ ಏನು ಬೇಕೋ ಅದನ್ನು ಪಡೆದುಕೊಳ್ಳುವುದರಲ್ಲೇ ಕಾರ್ಯನಿರತರಾದರು ಎಂದರು.

ಬಾಲಕೋಟ್ ವೈಮಾನಿಕ ದಾಳಿಯು ನಮ್ಮ 'ಮಿಷನ್ ಶಕ್ತಿ'ಗೆ ದೊರೆತ ಜಯವಾಗಿದೆ. ಆದರೆ, ವಿರೋಧಪಕ್ಷಗಳು ಇದಕ್ಕೂ ಸಾಕ್ಷ್ಯ ಕೇಳಿ ಟೀಕೆ ಮಾಡುತ್ತಿದ್ದವು ಎಂದು ವ್ಯಂಗ್ಯವಾಡಿದರು. ಇತ್ತೀಚೆಗೆ ಡಿಆರ್ ಡಿಓ ಅಭಿವೃದ್ಧಿಪಡಿಸಿರುವ A-SAT(ಉಪಗ್ರಹ ನಿರೋಧಕ ಕ್ಷಿಪಣಿ)ಕೂಡ'ಮಿಷನ್ ಶಕ್ತಿ'ಯಡಿಯಲ್ಲಿ ತಯಾರಾಗಿದೆ. ಇದನ್ನು ತಯಾರು ಮಾಡಿದ್ದರಿಂದ ಅಮೆರಿಕಾ, ರಷ್ಯಾ, ಚೈನಾ ಆದ ನಂತರ ಭಾರತ ವಿಶ್ವದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ ಎಂದರು.

'ಯಾವಾಗ ದೇಶದ ವಿಜ್ಞಾನಿಗಳು ಸಾಧನೆ ಮಾಡಿ ಯಶಸ್ಸು ಗಳಿಸುತ್ತಾರೋ, ಆಗ ಅವರು ವಿಜ್ಞಾನಿಗಳನ್ನು ಅಪಹಾಸ್ಯ ಮಾಡುತ್ತಾರೆ. ಇಂತಹ ಸಾಧನೆಗಳು ಇಡೀ ದೇಶಕ್ಕೆ ಹೆಮ್ಮೆ ತರುವಂತಹ ವಿಷಯವಾಗಿದೆ. ಉಗ್ರರ ಬಗ್ಗೆ ಯಾವ ರೀತಿಯ ಭಾಷೆ ಮಾತನಾಡುತ್ತಾರೋ ಅದೇ ಭಾಷೆಯನ್ನು ವಿಜ್ಞಾನಿಗಳ ಕುರಿತು ಮಾತನಾಡುವಾಗಲೂ ಬಳಸುತ್ತಾರೆ, ದೇಶದಲ್ಲಿ ಯಾವೊಬ್ಬ ವ್ಯಕ್ತಿಯೂ ಇವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ, ಇವರು ಪಾಕಿಸ್ತಾನದ ಪರ ಇರುವವರು. ಇವರ ಭಾವಚಿತ್ರಗಳು ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ' ಎಂದು ವಿರೋಧಪಕ್ಷಗಳನ್ನು ಹೆಸರಿಸದೆ ತೀವ್ರವಾಗ್ದಾಳಿ ನಡೆಸಿದರು.

ಅವರಿಗೆ (ವಿರೋಧಪಕ್ಷಗಳಿಗೆ) ನೆರೆಹೊರೆ ರಾಷ್ಟ್ರಗಳನ್ನು ಕಂಡರೆ ಬಹಳ ಪ್ರೀತಿ, ಆದರೆ, ಆ ಪ್ರೀತಿಯ ತೊರೆಯಲ್ಲಿ ನಮ್ಮ ದೇಶವನ್ನು ಮರೆತುಬಿಡುತ್ತಾರೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನಲ್ಲಿ ಒಂದು ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿೆದ್ದಾರೆ. ಇದರೊಂದಿಗೆ ಬಿಜೆಪಿ ಉತ್ತರಭಾರತದ ಹಲವು ರಾಜ್ಯಗಳ ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಯೋಜನೆ ರೂಪಿಸಿದೆ. ಅಸ್ಸಾಂ ಹಾಗೂ ಅರುಣಾಚಲ ಪ್ರದೇಶಗಳಲ್ಲಿ ಸುಮಾರು 25 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಸ್ಸಾಂನಲ್ಲಿ ಏಳು ಹಾಗೂ ಅರುಣಾಚಲ ಪ್ರದೇಶದಲ್ಲಿ ಒಂದು ಸೇರಿದಂತೆ8 ಸ್ಥಾನಗಳಲ್ಲಿ ಜಯಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.