
ಭಾರತ ಮತ್ತು ಜರ್ಮನಿ ಸಿಇಒ ಫೋರಂ ಸೋಮವಾರ ಗಾಂಧಿನಗರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಫ್ರೆಡರಿಕ್ ಮೆರ್ಜ್ ಭಾಗವಹಿಸಿದ್ದರು
ಪಿಟಿಐ ಚಿತ್ರ
ಅಹಮದಾಬಾದ್: ಗುಜರಾತ್‌ನ ಗಾಂಧಿನಗರದಲ್ಲಿರುವ ಮಹಾತ್ಮ ಮಂದಿರದಲ್ಲಿ ಭಾರತ ಮತ್ತು ಜರ್ಮನಿ ನಡುವೆ ಸೋಮವಾರ ಮಹತ್ವದ ದ್ವಿಪಕ್ಷೀಯ ಮಾತುಕತೆಗಳು ನಡೆದವು.
ಮಾತುಕತೆ ಮುಗಿದ ಬಳಿಕ ಪತ್ರಕರ್ತರಿಗೆ ಮಾಹಿತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಎರಡೂ ರಾಷ್ಟ್ರಗಳು ಇತ್ತೀಚೆಗಷ್ಟೇ ಪಾಲುದಾರಿಕೆಯ 25ನೇ ವರ್ಷ ಹಾಗೂ 75 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಪೂರೈಸಿವೆ. ಇಂತಹ ಮಹತ್ವದ ಘಟ್ಟದಲ್ಲಿ ಜರ್ಮನಿಯ ಚಾನ್ಸಲರ್ ಫ್ರೆಡರಿಕ್ ಮೆರ್ಜ್ ಅವರು ಭೇಟಿ ನೀಡಿದ್ದಾರೆ’ ಎಂದು ಹೇಳಿದ್ದಾರೆ.
‘ಫ್ರೆಡರಿಕ್ ಮೆರ್ಜ್ ಅವರ ಭೇಟಿಯು ಭಾರತ ಮತ್ತು ಜರ್ಮನಿ ನಡುವಿನ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಕಾರ್ಯತಂತ್ರದ ಸಂಬಂಧಕ್ಕೆ ನವ ಶಕ್ತಿ ನೀಡಲಿದೆ’ ಎಂದು ಮೋದಿ ಬಣ್ಣಿಸಿದ್ದಾರೆ.
‘ನಮ್ಮ ದ್ವಿಪಕ್ಷೀಯ ವ್ಯಾಪಾರ 50 ಶತಕೋಟಿ ಡಾಲರ್‌ಗಳನ್ನು ದಾಟಿ ಸಾರ್ವಕಾಲಿಕ ಎತ್ತರಕ್ಕೇರಿದೆ. ಜರ್ಮನಿಯ 2,000ಕ್ಕೂ ಅಧಿಕ ಕಂಪನಿಗಳು ಭಾರತದಲ್ಲಿ ಕಾರ್ಯಾಚರಿಸುತ್ತಿವೆ. ನಮ್ಮ ದೇಶದ ಮೇಲೆ ಅವರಿಗಿರುವ ವಿಶ್ವಾಸವನ್ನು ಇದು ತೋರಿಸುತ್ತದೆ’ ಎಂದಿದ್ದಾರೆ.
ಆರ್ಥಿಕತೆ, ರಕ್ಷಣಾ ಕ್ಷೇತ್ರ, ಔಷಧ ವಲಯ, ಕಾರ್ಯತಂತ್ರಗಳ ಪಾಲುದಾರಿಕೆ, ಶಿಕ್ಷಣ, ಕಾನೂನು ಬದ್ಧ ವಲಸೆ ಹೀಗೆ ಹಲವು ವಿಚಾರಗಳ ಕುರಿತ ಒಪ್ಪಂದಗಳಿಗೆ ಭಾರತ ಮತ್ತು ಜರ್ಮನಿ ಸಹಿ ಹಾಕಿವೆ.
ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ಮುಕ್ತ ಸಾರಿಗೆ, ಇಂಡೊ–ಪೆಸಿಫಿಕ್ ಕುರಿತ ಮಾತುಕತೆ ಸ್ಥಾಪನೆ, ನವೀಕರಿಸಬಹುದಾದ ಇಂಧನ ಕ್ಷೇತ್ರದ ಹೂಡಿಕೆ (1.24 ಶತಕೋಟಿ ಯುರೊ ಮೊತ್ತದ ಪಾಲುದಾರಿಕೆಯ ಕಾರ್ಯಕ್ರಮ), ಗ್ರೀನ್ ಹೈಡ್ರೋಜನ್ ಪಾಲುದಾರಿಕೆ, ಪಿಎಂ ಇ–ಬಸ್ ಸೇವೆ, ಅಹಮದಾಬಾದ್‌ನಲ್ಲಿ ಜರ್ಮನಿಯ ಕಾನ್ಸುಲ್ ಸ್ಥಾಪನೆ ವಿಚಾರಗಳನ್ನೂ ಈ ವೇಳೆ ಘೋಷಿಸಲಾಯಿತು.
ಏಷ್ಯಾದ ರಾಷ್ಟ್ರಗಳಿಗೆ ಮೆರ್ಜ್ ಅವರ ಮೊದಲ ಭೇಟಿ ಭಾರತದೊಂದಿಗೆ ಆರಂಭವಾಗಿರುವುದು ಜರ್ಮನಿ ಮತ್ತು ಭಾರತ ದೇಶಗಳ ಸಂಬಂಧದ ಮಹತ್ವ ತಿಳಿಸುತ್ತದೆಪ್ರಧಾನಿ ನರೇಂದ್ರ ಮೋದಿ
ಜರ್ಮನಿಯ ಚಾನ್ಸಲರ್ ಫ್ರೆಡರಿಕ್ ಮೆರ್ಜ್ ಅವರು ಮಂಗಳವಾರ ಬೆಂಗಳೂರಿಗೆ ಬರಲಿದ್ದಾರೆ. ಆಡುಗೋಡಿಯಲ್ಲಿರುವ ಜರ್ಮನ್ ಮೂಲದ ಬಾಷ್ ಕಂಪನಿಯ ಕ್ಯಾಂಪಸ್‌ಗೆ ಅವರು ಭೇಟಿ ನೀಡುವರು. ಮೆರ್ಜ್ ಅವರು 80 ಮಂದಿ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.