ADVERTISEMENT

ಕಾಂಗ್ರೆಸ್ ಪರ ಜೂನಿಯರ್ ಮೋದಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 14:08 IST
Last Updated 8 ನವೆಂಬರ್ 2018, 14:08 IST
ಕಾಂಗ್ರೆಸ್ ಕಚೇರಿ ಎದುರು ಅಭಿನಂದನ್ ಪಾಠಕ್
ಕಾಂಗ್ರೆಸ್ ಕಚೇರಿ ಎದುರು ಅಭಿನಂದನ್ ಪಾಠಕ್   

ಬಚೇಲಿ (ದಾಂತೇವಾಡ, ಛತ್ತೀಸಗಡ): ‘ಮಿತ್ರರೇ, 2014ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಹೇಳಿದ್ದ ಒಳ್ಳೆಯ ದಿನಗಳು ಬರುವುದೇ ಇಲ್ಲ. ನಿಮ್ಮ ಒಳಿತಿಗಾಗಿ ಕಾಂಗ್ರೆಸ್‌ಗೆ ಮತ ನೀಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ರೀತಿಯೇ ಕಾಣುವ ಅಭಿನಂದನ್ ಪಾಠಕ್ ಇಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಜೂನಿಯರ್ ಮೋದಿ ಎಂದೇ ಖ್ಯಾತರಾಗಿರುವ ಪಾಠಕ್ ಅವರು ಮೋದಿಯಂತೆಯೇ ಇದ್ದಾರೆ. ಮೋದಿಯಂತೆಯೇ ಬಟ್ಟೆ ಧರಿಸುತ್ತಾರೆ, ಮೋದಿಯಂತೆಯೇ ಮಾತನಾಡುತ್ತಾರೆ. ಪಾಠಕ್ ಅವರು ಬಿಜೆಪಿಯ ಮಿತ್ರಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಉತ್ತರಪ್ರದೇಶದ ಉಪಾಧ್ಯಕ್ಷರೂ ಆಗಿದ್ದರು.

ಈಚಿನವರೆಗೂ ಅವರು ಮೋದಿ ಮತ್ತು ಬಿಜೆಪಿ ಪರವಾಗಿಯೇ ಪ್ರಚಾರ ಮಾಡುತ್ತಿದ್ದರು. ಆದರೆ ತಿಂಗಳ ಹಿಂದಷ್ಟೇ ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್‌ ಸೇರಿದ್ದಾರೆ. ಮಧ್ಯಪ್ರದೇಶ, ಛತ್ತೀಸಗಡ ಚುನಾವಣೆಗಳಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ.

ADVERTISEMENT

‘ನಾನು ಮೋದೀಜಿಯಂತೆಯೇ ಕಾಣುವುದರಿಂದ ಜನರು ‘ಒಳ್ಳೆಯ ದಿನಗಳು ಎಲ್ಲಿ’ ಎಂದು ಪ್ರಶ್ನಿಸುತ್ತಾರೆ. ಜನರ ಸಮಸ್ಯೆಗಳನ್ನು ನೋಡಿ ರೋಸಿ ಹೋಗಿದ್ದೇನೆ. ಮೋದಿ ಸರ್ಕಾರದಿಂದ ಒಳ್ಳೆಯ ದಿನಗಳು ಬರುವುದಿಲ್ಲ. ಹೀಗಾಗಿ ಕಾಂಗ್ರೆಸ್ ಸೇರಿದ್ದೇನೆ’ ಎನ್ನುತ್ತಾರೆ ಪಾಠಕ್.

ಛತ್ತೀಸಗಡದ ಜಗದಾಲ್‌ಪುರದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಲಿದ್ದಾರೆ. ಅದೇ ಸ್ಥಳದಲ್ಲೇ ಜ್ಯೂನಿಯರ್‌ ಮೋದಿ ಸಹ ಬಿಜೆಪಿ ವಿರುದ್ಧ ಪ್ರಚಾರ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.