ADVERTISEMENT

ಮೋದಿ – ಮಮತಾ ಇನ್ನೊಂದು ಸುತ್ತಿನ ವಾಕ್ಸಮರ

ಟಿಎಂಸಿಯಿಂದ ಅಭಿವೃದ್ಧಿಗೆ ತಡೆ – ಪ್ರಧಾನಿ l ಕೋಮು ಗಲಭೆಗೆ ಬಿಜೆಪಿ ಚಿತಾವಣೆ – ಟಿಎಂಸಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 19:31 IST
Last Updated 3 ಏಪ್ರಿಲ್ 2021, 19:31 IST
ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು –ಪಿಟಿಐ ಚಿತ್ರ
ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು –ಪಿಟಿಐ ಚಿತ್ರ   

ಹರಿಪಾಲ್‌ (ಪಶ್ಚಿಮ ಬಂಗಾಳ) (ಪಿಟಿಐ): ರಾಜ್ಯದಲ್ಲಿ ಮೂರನೇ ಹಂತದ ಚುನಾವಣೆಗೆ ಎರಡು ದಿನಗಳು ಉಳಿದಿರುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪರಸ್ಪರರ ವಿರುದ್ದ ಇನ್ನೊಂದು ಸುತ್ತಿನ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯನ್ನು ‘ಹೊರಗಿನವರು’ ಎಂದು ಮಮತಾ ಬಣ್ಣಿಸಿದರೆ, ನಾವೆಲ್ಲರೂ ಭಾರತ ಮಾತೆಯ ಮಕ್ಕಳೇ, ಯಾವ ಭಾರತೀಯನೂ ಪಶ್ಚಿಮ ಬಂಗಾಳಕ್ಕೆ ಹೊರಗಿನವನಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಈ ‘ಭೂಮಿಯ ಪುತ್ರ’ನೇ ಮುಖ್ಯಮಂತ್ರಿಯಗುತ್ತಾರೆ ಎಂದು ಮೋದಿ ಘೋಷಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಮಮತಾ ಅವರು ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಟಿಎಂಸಿಯ ನಾಯಕರ ಹೇಳಿಕೆಯನ್ನು ಉಲ್ಲೀಖಿಸಿದ ಮೋದಿ, ‘ದೀದಿ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂಬುದರ ಸೂಚನೆ ಇದು. ಅವರು ಹೊರರಾಜ್ಯದಲ್ಲಿ ಕ್ಷೇತ್ರವೊಂದನ್ನು ಹುಡುಕುತ್ತಿದ್ದಾರೆ’ ಎಂದರು.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯೇ ಮುಂದಿನ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ‘ಹೊಸ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಾನು ಪಾಲ್ಗೊಳ್ಳುತ್ತೇನೆ. ಅಷ್ಟೇ ಅಲ್ಲ, ಮಮತಾ ಅವರು ತಡೆಹಿಡಿದಿರುವ ಪಿಎಂ ಕಿಸಾನ್‌ನಿಧಿ ಯೋಜನೆಯನ್ನು ಶೀಘ್ರದಲ್ಲೇ ಜಾರಿ ಮಾಡುವಂತೆ ಹೊಸ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

‘ಬಲೆಗೆ ಬೀಳಬೇಡಿ’

‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಾಯೋಜಿತ ಪಕ್ಷಗಳು ರಾಜ್ಯದಲ್ಲಿ ಅಲ್ಪಸಂಖ್ಯಾತರ ಮತಗಳ ಧ್ರುವೀಕರಣದ ಪ್ರಯತ್ನ ಮಾಡುತ್ತಿದೆ. ಮುಸ್ಲಿಮರು ಇವರ ಬಲೆಗೆ ಬೀಳಬಾರದು’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆನೀಡಿದರು.

ಪರೋಕ್ಷವಾಗಿ ಅವರು ಅಸಾದುದ್ದೀನ್‌ ಒವೈಸಿ ಅವರ ಎಐಎಂಐಎಂ ಹಾಗೂ ಅಬ್ಬಾಸ್‌ ಸಿದ್ದಿಕಿ ಅವರ ಐಎಸ್‌ಎಫ್‌ ಪಕ್ಷಕ್ಕೆ ಮತ ನೀಡದಂತೆ ಮುಸ್ಲಿಮರಲ್ಲಿ ಮನವಿ ಮಾಡಿದರು.

23 ರ್‍ಯಾಲಿಗಳಲ್ಲಿ ಮೋದಿ

ವಿಧಾನಸಭಾ ಚುನಾವಣೆಗಳನ್ನು ಎದುರಿಸುತ್ತಿರುವ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಒಟ್ಟಾರೆ 23 ಚುನಾವಣಾ ರ್‍ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈವರೆಗೆ ಪಾಲ್ಗೊಂಡಿದ್ದಾರೆ. ಅದರಲ್ಲಿ 10 ರ್‍ಯಾಲಿಗಳು ಕಳೆದ ಮೂರು ದಿನಗಳಲ್ಲಿ ನಡೆದಿವೆ.

ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಮೋದಿ ಅವರು ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ. ಪಶ್ಚಿಮ ಬಂಗಾಳವೊಂದನ್ನು ಬಿಟ್ಟರೆ ಉಳಿದೆಲ್ಲಾ ಕಡೆಗಳಲ್ಲಿ ಏ.6ರಂದು ಮತದಾನ ಮುಕ್ತಾಯವಾಗಲಿದೆ. ಇದಾದ ನಂತರವೂ ಪಶ್ಚಿಮ ಬಂಗಾಳದಲ್ಲಿ ಐದು ಹಂತಗಳ ಮತದಾನ ನಡೆಯಲಿದೆ. ಈ ಅವಧಿಯಲ್ಲಿ ಮೋದಿ ಅವರು ಇನ್ನಷ್ಟು ರ್‍ಯಾಲಿಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಮುಖ್ಯವಾಹಿನಿಗೆ ಬನ್ನಿ ಮಾವೊವಾದಿಗಳಿಗೆ ಸಲಹೆ

ತಾಮುಲಪುರ (ಅಸ್ಸಾಂ) (ಪಿಟಿಐ): ‘ಸರ್ಕಾರದ ಮುಂದೆ ಇನ್ನೂ ಶರಣಾಗತರಾಗದಿರುವ ಮಾವೊವಾದಿಗಳು, ಹೋರಾಟದ ಹಾದಿಯನ್ನು ಬಿಟ್ಟು ಮುಖ್ಯವಾಹಿನಿಗೆ ಬಂದು ‘ಆತ್ಮನಿರ್ಭರ ಅಸ್ಸಾಂ’ ನಿರ್ಮಾಣಕ್ಕೆ ನೆರವಾಗಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

ಬೊಡೊಲ್ಯಾಂಡ್‌ ಪ್ರಾಬಲ್ಯದ ಬಕ್ಸಾರ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಶಾಂತಿ ಹಾಗೂ ಅಭಿವೃದ್ಧಿಯ ಉದ್ದೇಶದಿಂದ ಇಲ್ಲಿನ ಜನರು ಹಿಂಸೆಯನ್ನು ತ್ಯಜಿಸಿದ್ದಾರೆ. ಮುಖ್ಯವಾಹಿನಿಗೆ ಬಂದವರಿಗೆ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಹೊಣೆ ಎಂದರು.

‘ಕೊಕ್ರಝಾರ್‌ನಲ್ಲಿ ಗುರುವಾರ ಆಯೋಜಿಸಿದ್ದ ಸಭೆಗೆ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಬಂದಿದ್ದರು. ಅದರಿಂದ ಅಚ್ಚರಿಗೊಂಡಿದ್ದ ನಾನು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕಾರಣವೇನು ಎಂದು ರಾಜಕೀಯ ವಿಶ್ಲೇಷಕರನ್ನು ಕೇಳಿದ್ದೆ. ‘ನಮ್ಮ ಮಕ್ಕಳು ಇನ್ನು ಶಸ್ತ್ರವನ್ನು ಎತ್ತಿಕೊಂಡು ಕಾಡಿಗೆ ಹೋಗುವುದಿಲ್ಲ ಎಂಬ ಭರವಸೆ ಈ ಮಹಿಳೆಯರಲ್ಲಿ ಮೂಡಿದೆ. ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ’ ಎಂದು ಅವರು ಹೇಳಿರುವುದಾಗಿ ಮೋದಿ ವಿವರಿಸಿದರು.

‘ಅಭಿವೃದ್ಧಿಯ ಫಲವು ಎಲ್ಲರಿಗೂ ಲಭಿಸಬೇಕು ಎಂಬುದು ನಮ್ಮ ಧೋರಣೆ. ಆದರೆ, ಸಮಾಜವನ್ನು ಒಡೆದು, ಮತಬ್ಯಾಂಕ್‌ಗಾಗಿ ಒಂದು ವರ್ಗದತ್ತ ಅಭಿವೃದ್ಧಿಯ ತುಣುಕುಗಳನ್ನು ಎಸೆಯುವವರು, ‘ನಾವು ಮಾತ್ರ ಜಾತ್ಯತೀತರು’ ಎಂದು ವಾದಿಸುತ್ತಿರುವುದು ದುರ್ದೈವದ ವಿಚಾರ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಅನ್ನು ಟೀಕಿಸಿದರು.

‘ಗಡ್ಡ, ಟೋಪಿ ಹಾಗೂ ಲುಂಗಿಧಾರಿಗಳೇ ಮುಂದಿನ ಸರ್ಕಾರ ರಚಿಸಲಿದ್ದಾರೆ’ ಎಂದು ಎಐಯುಡಿಎಫ್‌ನ ಮುಖಂಡ ಮದ್ರುದ್ದೀನ್‌ ಅಜ್ಮಲ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಮೋದಿ, ‘ಅಸ್ಸಾಂಗೆ ಇದಕ್ಕಿಂತ ದೊಡ್ಡ ಅಪಮಾನ ಇನ್ನೊಂದಿಲ್ಲ. ಈ ಅಪಮಾನವನ್ನು ಅಸ್ಸಾಂನ ಜನರು ಕ್ಷಿಮಿಸಲಾರರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.