
ನವದೆಹಲಿ: ತಮ್ಮ ಹಳೆಯ ಗೆಳೆಯನಿಗೆ ನೆರವಾಗಲಿಕ್ಕಾಗಿಯೇ ಪರಮಾಣು ಇಂಧನ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಂದಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಈ ಮಸೂದೆಯು ಪರಮಾಣು ಹಾನಿಯ ನಾಗರಿಕ ಹೊಣೆಗಾರಿಕೆ ಕಾಯ್ದೆಯ ಪ್ರಮುಖ ನಿಬಂಧನೆಗಳನ್ನು ತೆಗೆದು ಹಾಕುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಇದು 2026ರ ಅಮೆರಿಕ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಯಲ್ಲಿ ಎತ್ತಿದ ಕಳವಳವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ–2026ಕ್ಕೆ ಸಹಿ ಹಾಕಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ಈ ಕಾಯ್ದೆಯು 3,100 ಪುಟಗಳಿದ್ದು, ಪುಟ 1,912ರಲ್ಲಿ ಪರಮಾಣು ಹೊಣೆಗಾರಿಕೆ ನಿಯಮಗಳ ಕುರಿತು ಭಾರತ ಮತ್ತು ಅಮೆರಿಕ ನಡುವಿನ ಜಂಟಿ ಮೌಲ್ಯಮಾಪನವನ್ನು ಉಲ್ಲೇಖಿಸಲಾಗಿದೆ. ಪ್ರಧಾನಿಯು ಈ ಮಸೂದೆಯನ್ನು ಏಕೆ ಜಾರಿಗೊಳಿಸಿದರು ಎಂಬುದು ಇದೀಗ ನಮಗೆ ಖಚಿತವಾಗಿ ತಿಳಿದಂತಾಗಿದೆ. ಇದನ್ನು ಟ್ರಂಪ್ ಕಾಯ್ದೆ ಎಂಬುದಾಗಿ ಕರೆಯಬಹುದಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.