ADVERTISEMENT

ಶಬರಿಮಲೆ ಚಿನ್ನ ಕಳವು ಪ್ರಕರಣ: ಸಮಗ್ರ ತನಿಖೆ ಎಂದ ಮೋದಿ

ಪಿಟಿಐ
Published 23 ಜನವರಿ 2026, 14:45 IST
Last Updated 23 ಜನವರಿ 2026, 14:45 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ತಿರುವನಂತಪುರ: ವಿಧಾನಸಭೆ ಚುನಾವಣೆ ಎದುರು ನೋಡುತ್ತಿರುವ ಕೇರಳಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಶಬರಿಮಲೆ ಚಿನ್ನ ಕಳವು ಪ್ರಕರಣ ಪ್ರಸ್ತಾಪಿಸಿದರಲ್ಲದೇ, ಆಡಳಿತಾರೂಢ ಸಿಪಿಎಂ ಹಾಗೂ ವಿ‍ಪಕ್ಷ ಕಾಂಗ್ರೆಸ್‌ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದರು.

‘ಶಬರಿಮಲೆ ದೇವಸ್ಥಾನದಿಂದ ಚಿನ್ನ ಕಳವು ಮಾಡಿರುವ ಬಗ್ಗೆ ವರದಿಗಳಿವೆ. ದೇವರ ಚಿನ್ನವನ್ನೇ ಕಳವು ಮಾಡಲಾಗಿದೆ. ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಲಿದ್ದು, ಚಿನ್ನ ಕಳವು ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರನ್ನು ಜೈಲಿಗೆ ಅಟ್ಟಲಾಗುವುದು. ಇದು ಮೋದಿಯ ಗ್ಯಾರಂಟಿ’ ಎಂದು ಹೇಳಿದರು.

‘ಎಲ್‌ಡಿಎಫ್‌ ಹಾಗೂ ಯುಡಿಎಫ್‌ನ ಬಾವುಟ ಹಾಗೂ ಚಿಹ್ನೆಗಳು ಮಾತ್ರ ಬೇರೆಯಾಗಿದ್ದು, ಅವುಗಳ ರಾಜಕೀಯ ಕಾರ್ಯಸೂಚಿಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಶೂನ್ಯ ಉತ್ತರದಾಯಿತ್ವ, ಭ್ರಷ್ಟಾಚಾರ, ವಿಭಜನೆ ಮಾಡುವ ಕೋಮುವಾದವೇ ಇವುಗಳ ಕಾರ್ಯಸೂಚಿ’ ಎಂದು ಟೀಕಿಸಿದರು.

ADVERTISEMENT

ಕಾಂಗ್ರೆಸ್‌ ಹಾಗೂ ಮುಸ್ಲಿಂ ಲೀಗ್‌ ನಡುವಿನ ಮೈತ್ರಿ ಕುರಿತು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್‌ ಪಕ್ಷವನ್ನು ‘ಮುಸ್ಲಿಂ ಲೀಗ್‌ ಮಾವೊವಾದಿ ಕಾಂಗ್ರೆಸ್‌’(ಎಂಎಂಸಿ) ಎಂದು ಕರೆದರು.

‘ಕಾಂಗ್ರೆಸ್‌ ಪಕ್ಷವು ಮಾವೊವಾದಿಗಳಿಗಿಂತ ಹೆಚ್ಚು ಕಮ್ಯುನಿಸ್ಟ್‌ ಸಿದ್ಧಾಂತ ಮೈಗೂಡಿಸಿಕೊಂಡಿದ್ದರೆ, ಮುಸ್ಲಿಂ ಲೀಗ್‌ಗಿಂತಲೂ ಹೆಚ್ಚು ಕೋಮುವಾದಿಯಾಗಿದೆ. ಇದೇ ಕಾರಣಕ್ಕೆ ಅದನ್ನು ಎಂಎಂಸಿ ಎಂದು ಕರೆಯಲಾಗುತ್ತಿದೆ’ ಎಂದರು.

‘ಈ ಎರಡೂ ಪಕ್ಷಗಳು ಕೇರಳವನ್ನು ತಮ್ಮ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿವೆ’ ಎಂದು ಆರೋಪಿಸಿದರಲ್ಲದೇ, ‘ಈ ಬಗ್ಗೆ ಜನರು ಎಚ್ಚರದಿಂದ ಇರಬೇಕು’ ಎಂದು ಹೇಳಿದರು.

Quote - ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪರಂಪರೆಗೆ ಕಳಂಕ ತರುವುದಕ್ಕೆ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟ ಎಲ್ಲ ಪ್ರಯತ್ನಗಳನ್ನು ಮಾಡಲಿದೆ ನರೇಂದ್ರ ಮೋದಿ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.