ADVERTISEMENT

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಸೌದಿ ಪ್ರವಾಸ ಮೊಟಕುಗೊಳಿಸಿ ಮೋದಿ ವಾಪಸ್

ಪಿಟಿಐ
Published 23 ಏಪ್ರಿಲ್ 2025, 2:18 IST
Last Updated 23 ಏಪ್ರಿಲ್ 2025, 2:18 IST
   

ಜಿಡ್ಡಾ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡು ದಿನಗಳ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ಮಂಗಳವಾರ ರಾತ್ರಿ ಭಾರತಕ್ಕೆ ವಾಪಸ್ ಆದರು.

ನಿಗದಿತ ವೇಳಾಪಟ್ಟಿಯಂತೆ ಮೋದಿ ಬುಧವಾರ ರಾತ್ರಿ ನವದೆಹಲಿಗೆ ಮರಳಬೇಕಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಹಿನ್ನೆಲೆ ಅವರು ಮುಂಚಿತವಾಗಿ ದೇಶಕ್ಕೆ ವಾಪಸ್ ಆಗಿದ್ದಾರೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 28 ಜನರು ಮೃತಪಟ್ಟಿದ್ದು, ಅವರಲ್ಲಿ ಹೆಚ್ಚಿನವರು ಇತರ ರಾಜ್ಯಗಳಿಂದ ಬಂದವರು. 2019ರಲ್ಲಿ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.

ADVERTISEMENT

ಮಂಗಳವಾರ ಜೆಡ್ಡಾಗೆ ಆಗಮಿಸಿದ್ದ ಮೋದಿ, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಇಬ್ಬರೂ ನಾಯಕರು ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಭಯೋತ್ಪಾದನೆಯನ್ನು ಎದುರಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಈ ನಡುವೆ ಮೋದಿ, ತಮಗಾಗಿ ಏರ್ಪಡಿಸಿದ್ದ ಅಧಿಕೃತ ಔತಣಕೂಟವನ್ನು ಬಿಟ್ಟು ತಮ್ಮ ಪ್ರವಾಸ ಮೊಟಕುಗೊಳಿಸಿ ಮಂಗಳವಾರ ರಾತ್ರಿ ದೇಶಕ್ಕೆ ಮರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.