
ಚೆನ್ನೈ: ‘ಭ್ರಷ್ಟಾಚಾರದಲ್ಲಿ ಮುಳುಗಿರುವ ಡಿಎಂಕೆ ನೇತೃತ್ವದ ಸರ್ಕಾರಕ್ಕೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿದಾಯ ಹೇಳುವುದಕ್ಕೆ ತಮಿಳುನಾಡು ಜನರು ನಿರ್ಧರಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಚುನಾವಣಾ ರ‍್ಯಾಲಿಗೆ ಚಾಲನೆ ನೀಡುವುದಕ್ಕಾಗಿ ಚೆನ್ನೈ ಸಮೀಪದ ಮದುರಾಂತಕಂ ಪಟ್ಟಣಕ್ಕೆ ತೆರಳುವುದಕ್ಕೂ ಮುನ್ನ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಈ ಮಾತು ಹೇಳಿದ್ದಾರೆ.
‘ಎನ್‌ಡಿಎದ ಉತ್ತಮ ಆಡಳಿತ ಹಾಗೂ ಪ್ರಾದೇಶಿಕ ಆಶೋತ್ತರಗಳಿಗೆ ಸಂಬಂಧಿಸಿದ ಅದರ ಬದ್ಧತೆಯನ್ನು ತಮಿಳುನಾಡು ಜನರು ಮೆಚ್ಚಿದ್ದಾರೆ’ ಎಂದು ಹೇಳಿದ್ದಾರೆ.
‘ಎನ್‌ಡಿಎ ಮಾಡಿರುವ ದ್ರೋಹಗಳನ್ನು ತಮಿಳುನಾಡು ಜನರು ಮರೆತಿಲ್ಲ. ಚುನಾವಣೆ ವೇಳೆಯಲ್ಲಿ ಮಾತ್ರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಾರೆ’ ಎನ್ನುವ ಮೂಲಕ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿರುಗೇಟು ನೀಡಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್,‘ಸರ್ವ ಶಿಕ್ಷಣ ಅಭಿಯಾನದಡಿ ರಾಜ್ಯಕ್ಕೆ ಬರಬೇಕಾದ ₹3,458 ಕೋಟಿ ಯಾವಾಗ ಬಿಡುಗಡೆ ಮಾಡಲಾಗುತ್ತದೆ? ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯಪಾಲರು ಸೃಷ್ಟಿಸಿರುವ ‘ಅರಾಜಕತೆ’ಗೆ ಕೊನೆ ಯಾವಾಗ ಎಂದು ಮೋದಿ ಉತ್ತರಿಸುವರೇ? ಮರುವಿಂಗಡಣೆ ವೇಳೆ ತಮಿಳನಾಡಿನ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂಬ ಭರವಸೆಯನ್ನು ಮೋದಿ ನೀಡುವರೇ’ ಎಂದು ಪ್ರಶ್ನಿಸಿದ್ದಾರೆ.