ADVERTISEMENT

ಬಂಧ ಬೆಸುಗೆಗೆ ಸೇತುವೆಯಾದ ಮಾಮಲ್ಲಪುರಂ

ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿಳಿದ ಚೀನಾ ಅಧ್ಯಕ್ಷ ಷಿ l ಮೋದಿ ಜತೆ ದ್ವಿಪಕ್ಷೀಯ ಮಾತುಕತೆ l ವಾಣಿಜ್ಯ ಸಂಬಂಧ ಸುಧಾರಣೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 19:41 IST
Last Updated 11 ಅಕ್ಟೋಬರ್ 2019, 19:41 IST
ಷಿ ಅವರ ಸ್ವಾಗತಕ್ಕಾಗಿ ಹೆದ್ದಾರಿಯಲ್ಲಿ ಹೂವು– ತರಕಾರಿ – ಹಣ್ಣಿನಿಂದ ರಚಿಸಲಾಗಿದ್ದ ಕಮಾನು. ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಷಿ ಅವರನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬರಮಾಡಿಕೊಳ್ಳಲಾಯಿತು. ಮಾಮಲ್ಲಪುರಂನಲ್ಲಿ ಷಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಷಿ ಅವರನ್ನು ಮೋದಿ ಅವರು ಇಲ್ಲಿನ ಪಂಚರಥ ಪಾರಂಪರಿಕ ತಾಣಗಳಿಗೆ ಕರೆದೊಯ್ದರು
ಷಿ ಅವರ ಸ್ವಾಗತಕ್ಕಾಗಿ ಹೆದ್ದಾರಿಯಲ್ಲಿ ಹೂವು– ತರಕಾರಿ – ಹಣ್ಣಿನಿಂದ ರಚಿಸಲಾಗಿದ್ದ ಕಮಾನು. ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಷಿ ಅವರನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬರಮಾಡಿಕೊಳ್ಳಲಾಯಿತು. ಮಾಮಲ್ಲಪುರಂನಲ್ಲಿ ಷಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಷಿ ಅವರನ್ನು ಮೋದಿ ಅವರು ಇಲ್ಲಿನ ಪಂಚರಥ ಪಾರಂಪರಿಕ ತಾಣಗಳಿಗೆ ಕರೆದೊಯ್ದರು   

ಚೆನ್ನೈ/ಮಾಮಲ್ಲಪುರಂ: ಭಾರತ–ಚೀನಾ ನಡುವೆಸುಮಾರು 2,000 ವರ್ಷಗಳ ಹಿಂದೆಯೇ ನಂಟು ಬೆಸೆದಿದ್ದ ದೇಗುಲಗಳ ನಾಡು ಮಾಮಲ್ಲಪುರಂ ಎರಡೂ ದೇಶಗಳ ಮುಖ್ಯಸ್ಥರ ಅನೌಪಚಾರಿಕ ಶೃಂಗಸಭೆಗೆ ಸಾಕ್ಷಿಯಾಯಿತು. ಎರಡು ದಿನಗಳ ಭಾರತದ ಭೇಟಿಗಾಗಿ ಶುಕ್ರವಾರ ಇಲ್ಲಿಗೆ ಬಂದಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಾತುಕತೆ ನಡೆಸಲಿದ್ದಾರೆ.

ಎರಡೂ ದೇಶಗಳ ನಡುವಣ ವಾಣಿಜ್ಯ ಸಂಬಂಧ ಸುಧಾರಣೆ ಮತ್ತು ಗಡಿ ಬಿಕ್ಕಟ್ಟು ಪರಿಹಾರದ ಮಾರ್ಗೋಪಾಯಗಳನ್ನು ಇಬ್ಬರು ನಾಯಕರು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಹೇಳಿವೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಚೀನಾ ಮೇಲೆ ಅಮೆರಿಕವು ಹೇರಿರುವ ವಾಣಿಜ್ಯ ನಿರ್ಬಂಧದ ಪರಿಣಾಮಗಳನ್ನು ಚೀನಾ ಮತ್ತು ಭಾರತ ಎರಡೂ ಎದುರಿಸುತ್ತಿವೆ. ಈ ಪರಿಸ್ಥಿತಿಯನ್ನು ಎರಡೂ ದೇಶಗಳ ಆರ್ಥಿಕತೆ ಸುಧಾರಣೆಗೆ ಪೂರಕವಾಗಿ ಬಳಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ADVERTISEMENT

ಸಭೆಯ ನಂತರ ಇಬ್ಬರು ನಾಯಕರೂ ಪ್ರತ್ಯೇಕವಾಗಿ ಹೇಳಿಕೆ ನೀಡಲಿದ್ದಾರೆ. ಇದು ಜಂಟಿ ಹೇಳಿಕೆ ಆಗಿರುವುದಿಲ್ಲ. ಆನಂತರ ಷಿ ಅವರು ವಾಪಸ್ ಆಗಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರತಿಭಟನೆ: ಷಿ ಜಿನ್‌ಪಿಂಗ್ ಅವರು ಭಾರತಕ್ಕೆ ಭೇಟಿ ನೀಡುವುದನ್ನು ವಿರೋಧಿಸಿ ಅರುಣಾಚಲಪ್ರದೇಶದಲ್ಲೂ ಶುಕ್ರವಾರ ಪ್ರತಿಭಟನೆ ನಡೆದಿದೆ.

ಚರ್ಚೆಯ ಸಂಭಾವ್ಯ ವಿಷಯಗಳು...

* ಭಾರತ ಮತ್ತು ಚೀನಾ ನಡುವಣ ವಾಣಿಜ್ಯ ವಹಿವಾಟು ಏಕಪಕ್ಷೀಯ ವ್ಯಾಪಾರವಾಗಿದೆ. ಭಾರತವು ಚೀನಾದಿಂದ ಹಲವು ಸರಕುಗಳನ್ನು ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಆದರೆ ಭಾರತದಿಂದ ಚೀನಾಕ್ಕೆ ಆಗುವ ರಫ್ತಿನ ಪ್ರಮಾಣ ತೀರಾ ಕಡಿಮೆ. ಭಾರತದ ಸರಕು ಮತ್ತು ಸೇವೆಗಳಿಗೆ ಚೀನಾದಲ್ಲಿ ಅಗತ್ಯ ಮಾರುಕಟ್ಟೆ ಒದಗಿಸಿಕೊಡಬೇಕು ಎಂದು ಭಾರತವು ಒತ್ತಾಯಿಸುವ ಸಾಧ್ಯತೆ ಇದೆ

* ಚೀನಾ ನಿರ್ಮಿಸುತ್ತಿರುವ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಾದುಹೋಗುತ್ತದೆ. ಈ ಬಗ್ಗೆ ಭಾರತವು ಪ್ರತಿಭಟನೆ ದಾಖಲಿಸುವ ಸಾಧ್ಯತೆ ಇದೆ

* ಭಾರತದ ಔಷಧ ಮತ್ತು ತಂತ್ರಾಂಶಗಳಿಗೆ ಚೀನಾದಲ್ಲಿ ಮುಕ್ತಮಾರುಕಟ್ಟೆ ಒದಗಿಸಿಕೊಡಬೇಕು ಎಂಬುದು ಭಾರತದ ಉದ್ಯಮಿಗಳ ಬಹುವರ್ಷದ ಬೇಡಿಕೆ. ಮೋದಿ ಅವರು ಈ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ

* ಚೀನಾದ ದೂರಸಂಪರ್ಕ ಉಪಕರಣಗಳ ತಯಾರಕ ‘ಹುವಾವೆ’ ಕಂಪನಿಯ 5ಜಿ ತಂತ್ರಜ್ಞಾನದ ಅಳವಡಿಕೆಗೆ ಭಾರತದಲ್ಲಿ ಅವಕಾಶ ನೀಡಬೇಕು ಎಂದು ಚೀನಾ ಒತ್ತಾಯಿಸುವ ಸಾಧ್ಯತೆ ಇದೆ. ಈ ತಂತ್ರಜ್ಞಾನದ ಅಳವಡಿಕೆಗೆ ಅಮೆರಿಕ ಮತ್ತು ಯೂರೋಪ್‌ನ ಕೆಲವು ರಾಷ್ಟ್ರಗಳು ನಿಷೇಧ ಹೇರಿವೆ. ಈ ತಂತ್ರಜ್ಞಾನ ಅಳವಡಿಕೆಗೆ ಭಾರತವೂ ಹಿಂದೇಟು ಹಾಕುತ್ತಿದೆ

ಟಿಬೆಟ್‌ ವಿದ್ಯಾರ್ಥಿಗಳ ಪ್ರತಿಭಟನೆ, ಬಂಧನ

ಚೆನ್ನೈ ವಿಮಾನ ನಿಲ್ದಾಣ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ತಂಗಿರುವ ಐಟಿಸಿ ಗಾರ್ಡೇನಿಯಾ ಚೋಳ ಹೋಟೆಲ್ ಎದುರು ಪ್ರತಿಭಟನೆಗೆ ಮುಂದಾದ ಟಿಬೆಟ್‌ ಮೂಲದ 11 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಿನ್‌ಪಿಂಗ್‌ ಅವರು ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭದಲ್ಲಿ ಐವರು ಪ್ರತಿಭಟನೆಗೆ ಮುಂದಾಗಿದ್ದರು. ಅವರು ಪ್ರತಿಭಟನೆ ನಡೆಸುವ ಉದ್ದೇಶದಿಂದಲೇ ಬೆಂಗಳೂರಿನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.ಹೋಟೆಲ್‌
ಎದುರು ಏಳು ಜನರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇವರೆಲ್ಲರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಟಿಬೆಟ್‌ ಮೂಲದವರುಚೀನಾ ಅಧ್ಯಕ್ಷರ ಎದುರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿದ್ದವು. ಈ ಎಚ್ಚರಿಕೆಯ ಆಧಾರದಲ್ಲಿ 42 ಜನರನ್ನು ಪೊಲೀಸರು ಈ ಮೊದಲೇ ಬಂಧಿಸಿದ್ದರು.

ಮತ್ತೆ ‘ಗೋಬ್ಯಾಕ್‌ಮೋದಿ’

ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿಗೆ ಭೇಟಿ ನೀಡುತ್ತಿರುವುದನ್ನು ವಿರೋಧಿಸಿ, ತಮಿಳಿಗರು ಟ್ವಿಟರ್‌ನಲ್ಲಿ ಗೋಬ್ಯಾಕ್‌ಮೋದಿ ಅಭಿಯಾನಕ್ಕೆ ಮತ್ತೆ ಚಾಲನೆ ನೀಡಿದ್ದಾರೆ.ಟ್ವಿಟರ್‌ನಲ್ಲಿ #ಗೋಬ್ಯಾಕ್‌ಮೋದಿ ಎಂಬ ಹ್ಯಾಷ್‌ಟ್ಯಾಗ್ ಶುಕ್ರವಾರ ಟ್ರೆಂಡ್ ಆಗಿದೆ. ಶುಕ್ರವಾರ ಭಾರತದಿಂದ ಮಾಡಲಾದ ಟ್ವೀಟ್‌ನಲ್ಲಿ ಹೆಚ್ಚು ಬಳಕೆಯಾದ ಪದವಿದು.

2019ರ ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಅವರು ತಮಿಳುನಾಡಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ,ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ತಮಿಳುನಾಡಿನ ಜನತೆ ಪ್ರತಿಭಟಿಸಿದ್ದ ಪರಿ ಇದು. ಈಗ ತಮಿಳರು ಮತ್ತೆ ಇದೇ ಮಾರ್ಗದಲ್ಲಿ ಮೋದಿ ವಿರುದ್ಧ ಪ್ರತಿಭಟನೆ ದಾಖಲಿಸಿದ್ದಾರೆ.

#ಗೋಬ್ಯಾಕ್‌ಮೋದಿ ಹ್ಯಾಷ್‌ಟ್ಯಾಗ್‌ ಇರುವ 1.55 ಲಕ್ಷ ಟ್ವೀಟ್‌ಗಳು ಶುಕ್ರವಾರ ಪ್ರಕಟವಾಗಿವೆ. ಇವುಗಳಲ್ಲಿ ಶೇ 92ರಷ್ಟು ಟ್ವೀಟ್‌ಗಳನ್ನು ಭಾರತದಿಂದಲೇ ಮಾಡಲಾಗಿದೆ. ಉಳಿದ ಶೇ 8ರಷ್ಟು ಟ್ವೀಟ್‌ಗಳು ವಿಶ್ವದ ಬೇರೆಕಡೆಗಳಿಂದ ಪ್ರಕಟವಾಗಿವೆ.

ತಮಿಳು, ಇಂಗ್ಲಿಷ್ ಮತ್ತು ಚೀನಿ ಭಾಷೆಯಲ್ಲೂ #ಗೋಬ್ಯಾಕ್‌ಮೋದಿ ಹ್ಯಾಷ್‌ಟ್ಯಾಗ್‌ ಬಳಸಲಾಗಿದೆ.

ಕಾಶ್ಮೀರದಿಂದ ದೂರವಿರಲು ಷಿಗೆ ಹೇಳಿ: ಸಿಬಲ್

ನವದೆಹಲಿ: ಕಾಶ್ಮೀರ ವಿಚಾರದಿಂದ ದೂರ ಉಳಿಯುವಂತೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರಿಗೆ ನೇರವಾಗಿ ಹೇಳುವಂತೆ ಕಾಂಗ್ರೆಸ್‌ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ.

ಕಾಶ್ಮೀರ ವಿಚಾರವನ್ನು ‘ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದು ಜಿನ್‌ಪಿಂಗ್‌ ಅವರು ಇತ್ತೀಚೆಗೆ ಹೇಳಿದ್ದರು. ಅದನ್ನು ಇರಿಸಿಕೊಂಡು ಮೋದಿ ಅವರ ಮೇಲೆ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 5,000 ಕಿ.ಮೀ. ಪ್ರದೇಶವನ್ನು ತೆರವು ಮಾಡುವಂತೆ ಚೀನಾ ಅಧ್ಯಕ್ಷರ ಕಣ್ಣಲ್ಲಿ ಕಣ್ಣಿಟ್ಟು ಹೇಳಿ. ನಿಮ್ಮ 56 ಇಂಚು ಎದೆಯನ್ನು ಅವರಿಗೆ ತೋರಿಸಿ’ ಎಂದು ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಹೇಳಿದ್ದಾರೆ.

ಕಾಶ್ಮೀರದ ಚರ್ಚೆ ಕೈಗೆತ್ತಿಕೊಳ್ಳದೇ ಇರಲು ನಿರ್ಧಾರ?

ಕಾಶ್ಮೀರದ ವಿಚಾರವನ್ನು ಮಾತುಕತೆಯಲ್ಲಿ ಪ್ರಸ್ತಾಪಿಸದೇ ಇರಲು ನಿರ್ಧರಿಸಲಾಗಿದೆ. ‘ಭಾರತದ ಆಂತರಿಕ ವಿಚಾರದಲ್ಲಿ ಚೀನಾ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಅದನ್ನು ಭಾರತ ಪರಿಗಣಿಸುವುದೂ ಇಲ್ಲ’ ಎಂಬ ಸಂದೇಶವನ್ನು ಈ ಮೂಲಕ ರವಾನಿಸಲು ನಿರ್ಧರಿಸಲಾಗಿದೆ.ಕಾಶ್ಮೀರದ ವಿಚಾರವನ್ನು ಚರ್ಚೆಗೆ ಎತ್ತಿಕೊಂಡರೆ, ವಾಣಿಜ್ಯ ಸಹಕಾರದ ವಿಚಾರಗಳು ಹಿನ್ನೆಲೆಗೆ ಸರಿಯುವ ಸಾಧ್ಯತೆ ಇದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.