ADVERTISEMENT

ಸಾಮಾಜಿಕ ಏಕತೆಗೆ ಎಲ್ಲರೂ ಒತ್ತು ನೀಡಲಿ: ಮೋಹನ್‌ ಭಾಗವತ್‌

ಪಿಟಿಐ
Published 21 ನವೆಂಬರ್ 2025, 15:52 IST
Last Updated 21 ನವೆಂಬರ್ 2025, 15:52 IST
   

ಇಂಫಾಲ: ‘ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್‌) ಸಮಾಜವನ್ನು ಬಲಪಡಿಸಲು ಸಂಪೂರ್ಣವಾಗಿ ಸಮರ್ಪಿತವಾಗಿದೆ. ಎಲ್ಲರೂ ಸಾಮಾಜಿಕ ಏಕತೆಗೆ ಒತ್ತು ನೀಡಬೇಕು’ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಸಲಹೆ ನೀಡಿದರು.

ಮಣಿಪುರಕ್ಕೆ ಮೂರು ದಿನಗಳ ಭೇಟಿ ನೀಡಿರುವ ಭಾಗವತ್‌ ಅವರು ಎರಡನೇ ದಿನವಾದ ಶುಕ್ರವಾರ ಇಂಫಾಲದಲ್ಲಿ ಬುಡಕಟ್ಟು ಸಮುದಾಯದ ನಾಯಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

‘ಆರ್‌ಎಸ್‌ಎಸ್ ಯಾರ ವಿರುದ್ಧವೂ ಅಲ್ಲ. ಸಮಾಜವನ್ನು ನಾಶ ಮಾಡಲು ಸ್ಥಾಪಿಸಿದ್ದಲ್ಲ; ಬದಲಾಗಿ ಸಮಾಜ ಒಗ್ಗೂಡಿಸಲು ಸ್ಥಾಪಿಸಲಾಗಿದೆ. ಸಂಘವು ರಾಜಕೀಯದಲ್ಲಿ ತೊಡಗುವುದಿಲ್ಲ ಅಥವಾ ಯಾವುದೇ ಸಂಘಟನೆಯನ್ನು ನಿಯಂತ್ರಿಸುವುದಿಲ್ಲ. ಸ್ನೇಹ, ವಾತ್ಸಲ್ಯ ಮತ್ತು ಸಾಮಾಜಿಕ ಸಾಮರಸ್ಯದ ಮೂಲಕ ಮಾತ್ರ ಕಾರ್ಯನಿರ್ವಹಿಸುತ್ತದೆ’ ಎಂದು ಹೇಳಿದರು.

ADVERTISEMENT

‘ನಮ್ಮ ಕೊಡು–ಕೊಳ್ಳುವಿಕೆಯ ಪ್ರಜ್ಞೆಯಿಂದಾಗಿ ನಾವು ಒಗ್ಗಟ್ಟಾಗಿದ್ದೇವೆ. ಸುಂದರ ವೈವಿಧ್ಯದ ಹೊರತಾಗಿಯೂ, ನಾವು ಒಂದೇ ನಾಗರಿಕ ಕುಟುಂಬಕ್ಕೆ ಸೇರಿದವರು. ಹೀಗಾಗಿ, ಏಕತೆಯು ಏಕರೂಪತೆಯನ್ನು ಬೇಡುವುದಿಲ್ಲ’ ಎಂದು ತಿಳಿಸಿದರು.

‘ಆರ್‌ಎಸ್‌ಎಸ್ ಎಂಬುದು ಮನುಷ್ಯತ್ವ ಮತ್ತು ವ್ಯಕ್ತಿತ್ವ ರೂಪಿಸುವ ಚಳವಳಿ’ ಎಂದು ಬಣ್ಣಿಸಿದ ಅವರು, ‘ಸಂಘವು ತಳಮಟ್ಟದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರತಿಯೊಬ್ಬರೂ ಶಾಖೆಗಳಿಗೆ ಭೇಟಿ ನೀಡಬೇಕು’ ಎಂದು ಕೋರಿದರು.

‘ಬುಡಕಟ್ಟು ಸಮುದಾಯದ ಮುಖಂಡರು ಸ್ಥಳೀಯ ಸಂಪ್ರದಾಯ, ಭಾಷೆ ಮತ್ತು ಲಿಪಿಗಳ ಬಗ್ಗೆ ಹೆಮ್ಮೆ ಪಡಬೇಕು. ಸಾಂಸ್ಕೃತಿಕ ಗುರುತನ್ನು ಆಧರಿಸಿದ ಸ್ವದೇಶಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.